ಹರಪನಹಳ್ಳಿ, ಸೆ. 25 – ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಿ, ಪೌಷ್ಟಿಕತೆ ತುಂಬಲು ಪೋಷಣ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಿಡಿಪಿಓ ಅಶೋಕ್ ಹೇಳಿದರು.
ಉಚ್ಚಂಗಿದುರ್ಗ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಬೇಟಿ ಪಡಾವ್ ಬೇಟಿ ಬಚಾವ್ ಅರಿವು ಹಾಗೂ ಪೋಷಣ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಣ್ ಮಾಸಾಚರಣೆಯನ್ನು ಏಳನೇ ರಾಷ್ಟ್ರೀಯ ಕಾರ್ಯಕ್ರಮವಾಗಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆಸಲಾಗುತ್ತಿದೆ. ಇಂದಿನ ಜೀವನ ಪದ್ಧತಿಯಿಂದ ಕಿಶೋರಿ ಹಂತದಲ್ಲಿ ರಕ್ತ ಹೀನತೆಯು ಹೆಚ್ಚಾಗಿ ಕಂಡು ಬರುತ್ತಿದೆ. ವಯಸ್ಸಿಗೆ ತಕ್ಕಂತೆ ಎತ್ತರ, ತೂಕ ಇಲ್ಲದಿರುವುದು ಅಪೌಷ್ಟಿಕತೆಯ ಮುಖ್ಯ ಲಕ್ಷಣವಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣದ ಜೊತೆಗೆ ಅವರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಆಗಿದೆ. ಹೆಣ್ಣು ಮಕ್ಕಳ ಶೈಕ್ಷಣಿಕ ಫಲಿತಾಂಶ ಉತ್ತಮವಾಗಿದ್ದರೂ ಹೆಣ್ಣು ಮಕ್ಕಳು ಶೇ. 68 ರಷ್ಟು ಮಾತ್ರ ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ.ಪೋಷಕರು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗಮ್ಮ ರಮೇಶ್, ಪಿಡಿಓ ಪರಮೇಶ್ವರಪ್ಪ, ಪ್ರಾಂಶುಪಾಲ ಚೌಡಪ್ಪ, ಉಪಾಧ್ಯಕ್ಷ ಮಡ್ರಳ್ಳಿ ಕೆಂಚಪ್ಪ, ಸಂಯೋಜಕ ಲಿಂಗರಾಜ್, ಮೇಲ್ವಿಚಾರಕಕರಾದ ಜಯಶ್ರೀ, ಮುಖಂಡ ಉಮೇಶ್ ನಾಯ್ಕ, ರಮೇಶ, ಹನುಮಂತಪ್ಪ ಇತರರು ಇದ್ದರು.