ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪ್ರಾಪ್ತ

ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪ್ರಾಪ್ತ

ಹರಪನಹಳ್ಳಿ ಕಾರ್ಯ್ರಮದಲ್ಲಿ ಉಜ್ಜಯಿನಿ ಜಗದ್ಗುರುಗಳು

ಹರಪನಹಳ್ಳಿ, ಸೆ. 26 – ಗುರು-ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪ್ರಾಪ್ತವಾಗುತ್ತದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಚಿರಸ್ತಹಳ್ಳಿ ಗ್ರಾಮದಲ್ಲಿ ಮಲ್ಲಿಕಾ ರ್ಜುನ ಸ್ವಾಮಿ ಕಲ್ಮಠರವರ ನಿವಾಸದ ಬಳಿ ಗುರುವಾರ ಆಯೋಜಿಸಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ವ್ಯಕ್ತಿ ಸದಾ ಕ್ರಿಯಾಶೀಲನಾಗಿರುತ್ತಾನೆ ಆತ ಉತ್ತಮ ಆರೋಗ್ಯ ಹೊಂದಿರುತ್ತಾನೆ. ಪ್ರತಿಯೊಬ್ಬರೂ ಒಳ್ಳೆಯ ಆಲೋಚನೆಗಳೊಂದಿಗೆ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು, ಸಂಸ್ಕಾರ ಎನ್ನುವುದು ದೊಡ್ಡದು ಅದರ ಬೀಜ ಗಟ್ಟಿಯಾಗಿರಬೇಕು ಎಂದು ನುಡಿದರು.

ಶಾಸ್ತ್ರದ ಪ್ರಕಾರ ವ್ಯಕ್ತಿಯ ಹುಟ್ಟು ಅರವತ್ತು, ನಂತರ ಮರು ಹುಟ್ಟು ಆಗುತ್ತದೆ, ಎಪ್ಪತ್ತು ದಾಟಿದರೆ ಆತನಲ್ಲಿ ವಿಶಿಷ್ಟ ಶಕ್ತಿ ಅಡಗಿರುತ್ತದೆ, ಎಂಭತ್ತರ ದಶಕದಲ್ಲಿ ಆತನಿಗೆ ಸಹಸ್ರಾಚಂದ್ರ ದರ್ಶನವಾಗಿರುತ್ತದೆ ಎಂದು ತಿಳಿಸಿದರು. 

ಚಿರಸ್ತಹಳ್ಳಿಯ ಕಲ್ಮಠ್ ಪರಿವಾರದವರು ಸುಸಂಸ್ಕೃತ ಮನೆತನದವರು ಉತ್ತಮ ನಡೆ-ನುಡಿಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಅವರ ಎಲ್ಲಾ ಕಾರ್ಯಗಳು ಪ್ರಾಪ್ತವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ, ಅವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಹಡಗಲಿ ಗವಿಮಠದ ಹಿರಿಶಾಂತವೀರಸ್ವಾಮಿಜಿ, ಹಂಪಸಾಗರ ನವಲಿ ಹಿರೇಮಠದ ಅಭಿನವ ರುದ್ರಮುನಿಸ್ವಾಮೀಜಿ, ನಿಚ್ಚವನಹಳ್ಳಿ ಶಿವಯೋಗಿ ಹಾಲಸ್ವಾಮೀಜಿ, ಅಡವಿಹಳ್ಳಿ ಹಾಲಸ್ವಾಮಿ, ಮುತ್ತಿಗಿ ಶಿವಯೋಗಿ ಹಾಲಸ್ವಾಮಿ,  ಮರಿಯಮ್ಮನಹಳ್ಳಿ ಗುರುಪಾದಂಗಳ ಮಠದ ಮಲ್ಲಿಕಾರ್ಜುನ ಸ್ವಾಮಿ, ಎ.ಎಂ. ಗುರುದಾರುಕಾಚಾರ್ಯ ಶಾಸ್ತ್ರಿ, ಸಾನ್ನಿದ್ಯವಹಿಸಿದ್ದರು.

ಗ್ರಾ.ಪಂ. ಅಧ್ಯಕ್ಷ ಎಂ. ಪರಶುರಾಮಪ್ಪ, ಸದಸ್ಯ ಚನ್ನಮಲ್ಲಿಕಾರ್ಜುನ ಸ್ವಾಮಿ, ಎಂ. ರಾಜಶೇಖರ, ಸದ್ಯೋಜಾತಯ್ಯ, ನಾಗವೇಣಿ ಮಲ್ಲಿಕಾರ್ಜುನ ಕಲ್ಮಠ, ಮೃತ್ಯುಂಜಯ, ರೇಣುಕಸ್ವಾಮಿ ಕಲ್ಮಠ ಸೇರಿದಂತೆ ಗ್ರಾಮಸ್ಥರು ಇದ್ದರು.

error: Content is protected !!