ದಾವಣಗೆರೆ, ಸೆ.26- ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಹಾನ್ ಧರ್ಮನಿರಪೇಕ್ಷ ಮಾನವತಾವಾದಿ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಜನ್ಮ ದಿನಾಚರಣೆಯನ್ನು ವಿದ್ಯಾರ್ಥಿಗಳು ಗೌರವ ಪೂರ್ವಕವಾಗಿ ಆಚರಿಸಿದರು.
ವಿದ್ಯಾಸಾಗರರ ಜೀವನ ಹೋರಾಟದಿಂದ ಸ್ಫೂರ್ತಿ ಪಡೆದು, ಯುಬಿಡಿಟಿ ಕಾಲೇಜಿನಲ್ಲಿ ನಡೆಯುತ್ತಿರುವ ಶೇ.50 ಸೀಟುಗಳ ಮಾರಾಟದ ವಿರುದ್ಧದ ಹೋರಾಟವನ್ನು ಇನ್ನೂ ಹೆಚ್ಚು ಹರಿತಗೊಳಿಸುವ ಸಂಕಲ್ಪವನ್ನು ನೆರೆದಿದ್ದ ಎಲ್ಲಾ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತೆಗೆದುಕೊಂಡರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ ಅವರು, ಸುಮಾರು 150 ವರ್ಷಗಳ ಹಿಂದೆ ಶಿಕ್ಷಣ ಕೇವಲ ಮೇಲ್ಜಾತಿಯ ಪುರುಷರ ಸ್ವತ್ತಾಗಿತ್ತು. ಕೆಳ ವರ್ಗದವರು ಹಾಗೂ ಎಲ್ಲಾ ವರ್ಗದ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಕನಸಿನ ಬಾಗಿಲೂ ಮುಚ್ಚಿತ್ತು. ಇದರ ವಿರುದ್ಧ ಭಾರತದ ನವೋದಯದ ಧ್ರುವತಾರೆ ಈಶ್ವರ ಚಂದ್ರ ವಿದ್ಯಾಸಾಗರ್ ಅವರು ಸಮರವನ್ನೇ ಸಾರಿದರು. ಹಳ್ಳಿ ಹಳ್ಳಿಗೂ ಸಾಗಿ ಅದೆಷ್ಟೋ ಅಪಮಾನಗಳನ್ನು ಸಹಿಸಿ ಮುನ್ನುಗದಗ್ಗಿ ವಿದ್ಯಾಸಾಗರರ ಹೋರಾಟ, ತ್ಯಾಗದ ಪ್ರತಿಫಲವಾಗಿ ಎಲ್ಲಾ ವರ್ಗದ ಜನರಿಗೆ ಶಿಕ್ಷಣದ ಹೆಬ್ಬಾಗಿಲುಗಳೇ ತೆರೆದವು. ಪರಿಣಾಮವಾಗಿ ಶಿಕ್ಷಣವು ಇಂದು ಹೆಣ್ಣು ಮಕ್ಕಳಿಗೂ ಮುಕ್ತವಾಗಿದೆ.
ವಿದ್ಯಾಸಾಗರರವರು ಬಾಲ್ಯ ವಿವಾಹದ ವಿರುದ್ಧ ಹಾಗೂ ವಿಧವಾ ವಿವಾಹದ ಪರ ನಡೆಸಿದ ಹೋರಾಟ ನಿಜಕ್ಕೂ ಚಿರಸ್ಮರಣೀಯವಾದದ್ದು. ಇದರ ವಿರುದ್ಧ ಹೋರಾಡುತ್ತಲೇ ಹಳೆಯ ವಿಚಾರಗಳನ್ನು ಕಿತ್ತೊಗೆಯಲು ಧರ್ಮನಿರಪೇಕ್ಷ ಶಿಕ್ಷಣದ ಪರವಾಗಿ ಧ್ವನಿ ಎತ್ತಿದರು ಎಂದು ವಿದ್ಯಾಸಾಗರರ ಜೀವನ ಸಂಘರ್ಷನ್ನು ವಿವರಿಸಿದ್ದರು.
ಹೋರಾಟದ ಮುಂದಿನ ಹಂತವಾಗಿ ಸಾರ್ವಜನಿಕರ ನಡುವೆ ಸಹಿ ಸಂಗ್ರಹಣಾ ಅಭಿಯಾನಕ್ಕೆ ಎಐಡಿಎಸ್ಓ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನೆರದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾಸಾಗರರು, ಸಮಾಜದಲ್ಲಿದ್ದ ಮೌಢ್ಯ, ಅಜ್ಞಾನ ಹಾಗೂ ಅವೈಜ್ಞಾನಿಕ ಚಿಂತನೆಗಳನ್ನು ಮಟ್ಟ ಹಾಕಲು ಹಾಗೂ ಮಾನವ ಸಮಾಜದ ಏಳಿಗೆಗೆ ಅವಶ್ಯವಿರುವ ವಿಜ್ಞಾನ, ಅರ್ಥಶಾಸ್ತ್ರ, ಗಣಿತ, ತರ್ಕ ಹಾಗೂ ಇಂಗ್ಲೀಷ್ ಶಿಕ್ಷಣದ ಮಹತ್ವವನ್ನು ಸಾರಿದರು. ತಮ್ಮ ಇಡೀ ಜೀವನವನ್ನು ವೈಯುಕ್ತಿಕ ಹಿತಾಸಕ್ತಿಗಳಿಂದ ದೂರವಿರಿಸಿ, ಸಾಮಾಜಿಕ ಹಿತಾಸಕ್ತಿಗೆ ಮುಡುಪಾಗಿಟ್ಟಿದ್ದರು. ಇಂತಹ ಉದಾತ್ತ ಮೌಲ್ಯ ಮತ್ತು ಸಂಸ್ಕ್ರತಿಯನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳುವ ಅತ್ಯಾವಶ್ಯಕತೆಯು ನಮ್ಮ ಮುಂದಿದೆ.
ಇಂದು ಶಿಕ್ಷಣವು ಖಾಸಗೀಕರಣಗೊಂಡು ಮಾರಾಟವಾಗುತ್ತಿದೆ. ಯುಬಿಡಿಟಿಯಲ್ಲಿ ಮಾಡಲಾಗುತ್ತಿರುವ ಪೇಮೆಂಟ್ ಕೋಟಾ ಒಳಗೊಂಡಂತೆ ಸರ್ಕಾರಗಳ ಹಲವು ವಿದ್ಯಾರ್ಥಿ ವಿರೋಧಿ ನೀತಿಗಳಿಂದಾಗಿ ಶಿಕ್ಷಣದ ವ್ಯಾಪಾರಿ ಕರಣದಿಂದ ಅಸಂಖ್ಯಾತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದಿನೇ ದಿನೇ ಸರ್ಕಾರಿ ಶಾಲಾ – ಕಾಲೇಜುಗಳಿಗೆ ಕೊಡುತ್ತಿರುವ ಅನುದಾನಗಳನ್ನು ಕಡಿತಗೊಳಿಸಲಾಗುತ್ತದೆ. ನಿರುದ್ಯೋಗ, ಬಡತನ, ಹಸಿವು ದೇಶದಾದ್ಯಂತ ತಾಂಡವವಾಡುತ್ತಿದೆ. ಬಡ ರೈತ ಕಾರ್ಮಿಕರು, ಮಧ್ಯಮ ವರ್ಗದ ಜನತೆ ತುಳಿತಕ್ಕೊಳಪಟ್ಟಿದ್ದಾರೆ.
ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಎಂಥದ್ದೇ ಅನ್ಯಾಯವನ್ನೂ ಪ್ರಶ್ನಿಸುತ್ತಿದ್ದ ವಿದ್ಯಾಸಾಗರರ ಆದರ್ಶಗಳನ್ನು ಮೈಗೂಡಿಸಿಕೊಂಡು ಇಂದಿನ ಅನ್ಯಾಯಗಳ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಲು ಮುನ್ನುಗ್ಗಬೇಕಿದೆ. ಆಗ ಮಾತ್ರ ನಾವು ವಿದ್ಯಾಸಾಗರರಿಗೆ ನೈಜ ಗೌರವವನ್ನು ಸಲ್ಲಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿದ್ಯಾಸಾಗರರ ಈ ಸಂಸ್ಕ್ರತಿಯನ್ನು ನೆನೆದು ಅಳವಡಿಸಿಕೊಳ್ಳುತ್ತಾ ಒಗ್ಗಟ್ಟಾಗಿ ಅನ್ಯಾಯ ಮತ್ತು ಅಸತ್ಯದೊಂದಿಗೆ ಯಾವುದೇ ರಾಜಿಯಿಲ್ಲದೇ, ನ್ಯಾಯ ಮತ್ತು ಸತ್ಯಕ್ಕಾಗಿ ದನಿ ಎತ್ತಿ, ಎಲ್ಲಾ ರೀತಿಯ ಶೋಷಣಾ ಮುಕ್ತ ಸಮಾಜ ಕಟ್ಟಲು ಮುನ್ನಡೆಯೋಣವೆಂದು ಸಂಕಲ್ಪತೊಡಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್, ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ಸದಸ್ಯರಾಗಿರುವ ಹಲವಾರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.