ಹೊನ್ನಾಳಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ
ಹೊನ್ನಾಳಿ, ಸೆ. 25 – ಬರುವ 20 ದಿನಗಳ ಒಳಗಾಗಿ ಹೊನ್ನಾಳಿ-ತುಮ್ಮಿನಕಟ್ಟಿ ರಸ್ತೆ ಅಗಲೀಕರಣ ಮಾಡುವ ಸಾಧ್ಯತೆ ಇರುವ ಕಾರಣ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬರುವ ತುಮ್ಮಿನಕಟ್ಟೆ ರಸ್ತೆ ಹಳೇ ಕಟ್ಟಡಗಳನ್ನು ಪೂರ್ಣ ತೆರವು ಮಾಡಿ ನೂತನ ಕಾಂಪ್ಲೆಕ್ಸ್ ನಿರ್ಮಾಣ ಮಾಡಲು ಸಂಘದ ಸರ್ವ ಸದಸ್ಯರು ಒಪ್ಪಿಗೆ ನೀಡಬೇಕಿದೆ ಎಂದು ಸಂಘದ ನಿರ್ದೇಶಕರೂ ಆಗಿರುವ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಹೊನ್ನಾಳಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಟ್ಟಣದ ಹೃದಯ ಭಾಗವಾದ ತುಮ್ಮಿನಕಟ್ಟೆ ರಸ್ತೆ ಶೀಘ್ರ ಅಗಲೀಕರಣಗೊಳುತ್ತದೆ. ನಂತರ ಲಭ್ಯವಾಗುವ 3000 ಅಡಿ ಜಾಗದಲ್ಲಿ ನುರಿತ ಇಂಜಿನಿಯರ್‍ಗೆ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಲು ಸೂಚಿಸಿ ವ್ಯಾಪಾರ ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ರಸ್ತೆ ಅಗಲೀಕರಣದ ಪರಿಹಾರದ ಮೊತ್ತ 32 ಲಕ್ಷ. ನಬಾರ್ಡ್‍ನಿಂದ 50 ಲಕ್ಷ, ಅಕ್ಕಿಗಿರಣಿ ಮಹಾ ಮಂಡಳಿಯಿಂದ 20 ಲಕ್ಷ ರೂ. ಮಂಜೂರು ಮಾಡಿಸುವ ಮೂಲಕ, ಇತರೆ ಬಾಬ್ತುಗಳಿಂದ ಹಣವನ್ನು ಸಂಗ್ರಹಿಸಿ ಉತ್ತಮವಾದ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು ಎಂದರು.
ಈಗಿರುವ ತುಮ್ಮಿನಕಟ್ಟೆ ರಸ್ತೆ ಇಕ್ಕೆಲಗಳಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಯಿಂದ ತಾಲ್ಲೂಕು ಕಚೇರಿ ಸೇರಿದಂತೆ ಇತರೆ ಕಚೇರಿಗಳಿಗೆ ತೆರಳಲು ನಾಗರಿಕರಿಗೆ ಹಾಗೂ ದಾರಿಹೋಕರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ಕಾಂಪ್ಲೆಕ್ಸ್ ನಿರ್ಮಾಣದ ನೆಲ ಮಹಡಿ ಹಂತದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿ 2ನೇ ಮತ್ತು 3ನೇ ಮಹಡಿ ಕಟ್ಟಡಗಳ ಸಂಕೀರ್ಣ ನಿರ್ಮಿಸಲಾಗುವುದು. ಸಂಕೀರ್ಣದ ಮಳಿಗೆಗಳಿಗೆ ಉತ್ತಮ ಬಾಡಿಗೆ ಬಂದು ಸಂಘಕ್ಕೆ ಆದಾಯ ಬರುತ್ತದೆ ಹಾಗೂ ನೆಲ ಮಹಡಿಯಲ್ಲಿ ನಿಲುಗಡೆಗೊಳ್ಳಲು ದ್ವಿಚಕ್ರವಾಹನಗಳ ನಿಲುಗಡೆ ಟೆಂಡರ್ ಕರೆದು ಕರ ವಸೂಲಿ ವ್ಯವಸ್ಥೆ ಮಾಡಬಹುದಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಚ್.ಬಸವರಾಜ್, 2023-24ನೇ ಸಾಲಿನಲ್ಲಿ 5,80000 ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಉಪಾಧ್ಯಕ್ಷ ಎಚ್.ಡಿ.ಬಸವರಾಜಪ್ಪ, ನಿರ್ದೇಶಕರು ಗಳಾದ ಎಂ.ಎಚ್.ಗಜೇಂದ್ರಪ್ಪ, ಡಿ.ಮಂಜುನಾಥ, ಎಚ್.ಪಿ.ಶೇಖರಪ್ಪ, ಎಚ್.ಜಿ.ಶಂಕರಮೂರ್ತಿ, ಕೆ.ಬಿ.ಸಿದ್ದನಗೌಡ, ಎಲ್.ಎಸ್.ಅನಂತನಾಯ್ಕ, ಎಂ.ಜಿ.ಹಾಲಪ್ಪ, ಕೆ.ಚೇತನ್, ಎಚ್.ಸಿ.ಪ್ರಕಾಶ್, ನಾಗಮ್ಮ, ಬಸಮ್ಮ, ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ಇ.ಮುರುಗೇಶ್ ಉಪಸ್ಥಿತರಿದ್ದರು.