ಹರಿಹರ : ‘ಪೋಷಣ್ ಮಾಸ, ಭೇಟಿ ಬಚಾವೋ..’ ಕಾರ್ಯಕ್ರಮದಲ್ಲಿ ಸಿಪಿಐ ಸುರೇಶ್ ಸಗರಿ
ಹರಿಹರ, ಸೆ.25- ಮಹಿಳೆಯರು ಇಂದು ಎಲ್ಲಾ ರಂಗದಲ್ಲಿಯೂ ಮೇಲುಗೈ ಸಾಧಿಸುತ್ತಿದ್ದು, ಸಮಾಜದಲ್ಲಿ ಅವರ ಬಗ್ಗೆ ಇದ್ದ ಅಸಮಾನತೆ, ಕೀಳರಿಮೆ ಮತ್ತು ತಾತ್ಸಾರ ಭಾವನೆಗಳು ಕಡಿಮೆಯಾಗಿವೆ ಇದಕ್ಕೆ ಶಿಕ್ಷಣವೇ ಮುಖ್ಯ ಕಾರಣವಾಗಿದೆ ಎಂದು ಸಿಪಿಐ ಸುರೇಶ್ ಸಗರಿ ಹೇಳಿದರು.
ನಗರದ ಗುರುಭವನದ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಿನ್ನೆ ನಡೆದ `ಪೋಷಣ್ ಮಾಸ’ ಮತ್ತು `ಭೇಟಿ ಬಚಾವೋ ಭೇಟಿ ಪಡಾವೋ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಗರ್ಭದಲ್ಲಿ ಹೆಣ್ಣು ಜನನ ಆಗುತ್ತದೆ ಎಂಬುದು ಗೊತ್ತಾದ ದಿನದಿಂದ ಹಿಡಿದು, ಮಣ್ಣಿನಲ್ಲಿ ಲೀನವಾಗುವವರೆಗೂ ಹೆಣ್ಣಿನ ಬಗ್ಗೆ ಅಸಮಾನತೆ, ತಾತ್ಸಾರದ ಮನೋಭಾವ ಇದ್ದವು. ಆದರೆ ಇತ್ತೀಚೆಗೆ ಮಹಿಳೆಯರು ಪುರುಷರಂತೆ ಎಲ್ಲಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ಚಾಪನ್ನು ಮೂಡಿಸುತ್ತಾ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವುರಿಂದ ಅಸಮಾನತೆ ಕಡಿಮೆ ಆಗುತ್ತಾ ಸಾಗಿದೆ. ಇದಕ್ಕೆ ಶಿಕ್ಷಣವೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಲಿಂಗ ತಾರತಮ್ಯ ಹೋಗಲಾಡಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತಂದಾಗ ಲಿಂಗ ತಾರತಮ್ಯ ಹೋಗಲಾಡಿಸಬಹುದು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೂ ಸಮಾಜದಲ್ಲಿ ಪುರುಷರಿಗೆ ಸರಿ ಸಮಾನವಾದ ಗೌರವ ಸಿಗುವಂತಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕರು ಶ್ರಮವಹಿಸಿ ಕೆಲಸ ಮಾಡುತ್ತಿರುವ ಕಾರಣ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ಸಿಗುವಂತಾಗಿದೆ ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಉತ್ತೇಜನ ನೀಡಲು ಮತ್ತು ಅವರಲ್ಲಿ ಇರುವಂತ ನಕಾರಾತ್ಮಕ ವಿಚಾರಗಳನ್ನು ನಿರ್ಮೂಲನೆ ಮಾಡುವುದರ ಜೊತೆಗೆ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುವುದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿಡಿಪಿಓ ಪೂರ್ಣಿಮಾ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಡಿಸಿಪಿ ರಶೀದಾ, ಹೆಣ್ಣು ಮಗುವನ್ನು ಉಳಿಸಿ, ಅದನ್ನು ಓದಿಸಿ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಗಂಡು ಮಗುವಿನಂತೆ ಹೆಣ್ಣು ಮಗು ಹುಟ್ಟಿದಾಗಳು ಸಂಭ್ರಮಾಚರಣೆ ಇರಬೇಕು ಮತ್ತು ಪ್ರತಿಯೊಂದು ಮಗುವಿಗೂ ಅಪೌಷ್ಟಿಕತೆ ಹೋಗಲಾಡಿಸಿ, ರಕ್ತ ಹೀನತೆ ತಡೆದು ಸದೃಢ ದೇಹವನ್ನು ಹೊಂದುವಂತೆ ಮಾಡಿದಾಗ ಮಗುವಿನ ಆರೋಗ್ಯ ರಕ್ಷಣೆ ಮಾಡಿದಂತೆ ಆಗುತ್ತದೆ ಎಂದು ಹೇಳಿದರು
ನಗರಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು ಮಾತನಾಡಿ, ಹೆಣ್ಣು ಎಂಬುದು ಇನ್ನೊಂದು ಮನೆಯನ್ನು ಬೆಳಗುವ ನಂದಾದೀಪ ಎಂದು ಭಾವಿಸಿ, ಅಸಮಾನತೆ ಇರುತ್ತಿತ್ತು ಮತ್ತು ಹೆಣ್ಣು ಹುಟ್ಟಿದರೆ ಅಪಶಕುನ ಎಂಬ ಕೀಳರಮೆ ಇತ್ತು. ಆದರೆ ಇತ್ತೀಚೆಗೆ ಹೆಣ್ಣು ಸಂಸಾರವನ್ನು ಬೆಳಕಿನ ಕಡೆಗೆ ತೆಗೆದುಕೊಂಡು ಹೋಗವಂತಹ ಕೆಲಸವನ್ನು ಮಾಡುತ್ತಿದ್ದಾಳೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ವಿಶ್ವನಾಥ್, ನ್ಯಾಯವಾದಿ ಜೆ.ಎಸ್. ಶುಭಾ, ಉಪನ್ಯಾಸಕರಾದ ವಾಣಿಶ್ರೀ ರೆಡ್ಡಿ, ನಾಗವೇಣಿ, ವೀರೇಶ್, ಅಂಗನವಾಡಿ ಕಾರ್ಯಕರ್ತರ ಸಂಘದ ರಾಜ್ಯ ಉಪಾಧ್ಯಕ್ಷೆ ಬಿ.ಎಸ್ ನಿರ್ಮಲ, ಮೇಲ್ವಿ ಚಾರಕರಾದ ಶೈಲಾ ಮೈದೂರು, ಗೀತಾ, ಮಂಜುಳಾ, ಲಕ್ಷ್ಮೀ ಹುಡೇದಮನಿ, ಶೋಭಾ ಪಾಟೀಲ್ ಇತರರು ಹಾಜರಿದ್ದರು.