ಜಗಳೂರು, ಸೆ. 25 – ‘ಪರಿಸರ ಸ್ವಚ್ಛತೆ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ’ ಎಂದು ಜೆಎಂಎಫ್ಸಿ ಮತ್ತು ಸಿವಿಲ್ ನ್ಯಾಯಾಧೀಶ ಆರ್. ಚೇತನ್ ಹೇಳಿದರು.
ಪಟ್ಟಣದ ರಾಮಾಲಯ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣ ಪಂಚಾಯಿತಿ ಕಸದ ವಾಹನಗಳಲ್ಲಿ ಪ್ರತಿನಿತ್ಯ ಹಸಿಕಸ- ಒಣಕಸಗಳನ್ನು ವಿಂಗಡಿಸಿ ವಿಲೆವಾರಿ ಮಾಡಬೇಕಿದೆ. ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಂಡು ಪಟ್ಟಣವನ್ನು ಸಾಂಕ್ರಾಮಿಕ ರೋಗಗಳಿಂದ ಮುಕ್ತಗೊಳಿಸಬೇಕು’ ಎಂದು ಸಲಹೆ ನೀಡಿದರು.
ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗುವಾಗ ಸುರಕ್ಷಿತ ಕಿಟ್ ಗಳನ್ನು ಧರಿಸಿ, ವೈಯಕ್ತಿಕ ಆರೋಗ್ಯಕ್ಕೆ ಒತ್ತುಕೊಡಬೇಕು’ಎಂದು ಸಲಹೆ ನೀಡಿದರು.
ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ರಾಜ್ಯವ್ಯಾಪಿ ಸೆ.14 ರಿಂದ ಅ. 2 ರವರೆಗೆ ಸ್ವಭಾವ ಸ್ವಚ್ಛತೆ-ಸಂಸ್ಕಾರ ಸ್ವಚ್ಛತೆ ಅಭಿಯಾನಕ್ಕೆ ಸಾರ್ವಜನಿಕರು ಕೈಜೋಡಿಸಬೇಕು. ಪೌರ ಕಾರ್ಮಿಕನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಮಲೀನಗೊಳಿಸದೆ ಸೌಂದರ್ಯ ಕಾಪಾಡಬೇಕು’ಎಂದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಮಾಜಿ ಅಧ್ಯಕ್ಷ ಸಿದ್ದಪ್ಪ, ವಕೀಲ ವಂಶಿ ಕೃಷ್ಣ ಪಂ. ಆರೋಗ್ಯ ನಿರೀಕ್ಷಕ ಪ್ರಶಾಂತ್ ಸೇರಿದಂತೆ ಪೌರ ಕಾರ್ಮಿಕರು ಇದ್ದರು.