ಡಿಆರ್ಎಂ ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನ್ಯಾ. ಮಹಾವೀರ ಕರೆಣ್ಣವರ ಕಿವಿಮಾತು
ದಾವಣಗೆರೆ, ಸೆ. 25- ರ‍್ಯಾಗಿಂಗ್ ಅನ್ನುವುದು ವಿದ್ಯಾರ್ಥಿ ಜೀವನದಲ್ಲಿ ಬರುವ ಪೆಡಂಭೂತ. ಇದು ಒಂದು ಸಮಾಜಘಾತುಕ ಚಟುವಟಿಕೆ. ಸಾಮಾಜಿಕ, ಬೌದ್ಧಿಕ, ಧಾರ್ಮಿಕ ಮತ್ತು ಮೌಲ್ಯಿಕ ಚಟುವಟಿಕೆಗಳಿಗೆ ವಿರೋಧವಾಗಿರುವ ರಾಗಿಂಗ್ ಅನ್ನು ಸಮಾಜದಿಂದ ಹೊಡೆದೋಡಿಸಬೇಕು. ರ‍್ಯಾಗಿಂಗ್ ಮರೆತು ವಿದ್ಯಾಭ್ಯಾಸದ ಕಡೆ ಗಮನಕೊಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಡಿಆರ್ಎಂ ಕಾಲೇಜಿನಲ್ಲಿ ರ‍್ಯಾಗಿಂಗ್ ವಿರೋಧಿ ವಿಷಯ ಕುರಿತು ನಿನ್ನೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನ ಅಂದರೆ ಹೇಗೆ ಇರಬೇಕು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ತಂದೆ – ತಾಯಿ, ಪಾಲಕ-ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಗಳು ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿ ಹೇಳಿದರು.
ವಕೀಲರಾದ ಸಿ.ಪಿ. ಅನಿತಾ ಮತ್ತು ಎವಿಕೆ ಕಾಲೇಜಿನ ಪ್ರಾಂಶುಪಾಲರಾದ ಕಮಲಮ್ಮ ಸೊಪ್ಪಿನ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ತಂದೆ-ತಾಯಿಯರ ಆಶಯದಂತೆ ಉತ್ತಮ ನಡುವಳಿಗಳನ್ನು ಹೊಂದಿ ಉತ್ತಮ ವಿದ್ಯಾಭ್ಯಾಸ ಮಾಡಬೇಕೆಂದು ಕರೆ ನೀಡಿದರು. ಯಾವುದೇ ಕಾರಣಕ್ಕೂ ಇನ್ನೊಬ್ಬರನ್ನು ರ‍್ಯಾಗಿಂಗ್ ಮಾಡುವ ಮೂಲಕವಾಗಲೀ ಅಥವಾ ಇನ್ಯಾವುದೇ ರೀತಿಯಿಂದಾಗಲೀ ತೊಂದರೆ ಕೊಡುವುದನ್ನು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಡಿ.ಆರ್.ಎಂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡು ತಂದೆ-ತಾಯಿಯರಿಗೆ ಮತ್ತು ಕಾಲೇಜಿಗೆ ಒಳ್ಳೆಯ ಹೆಸರು ತರಬೇಕೆಂದು ತಿಳಿಸಿದರು. ಈಗಾಗಲೇ ಕಾಲೇಜಿನಲ್ಲಿ ರಾಗಿಂಗ್ ನಿಷೇಧ ಕುರಿತು ಸಮಿತಿಯನ್ನು ರಚಿಸಲಾಗಿದ್ದು ಆ ಮೂಲಕ ಯಾವುದೇ ಅಹಿತರ ಚಟುವಟಿಕೆಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಮತ್ತೊಮ್ಮೆ ಮಾಹಿತಿ ನೀಡಿದರು.
ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕ ಡಾ. ಟಿ. ಮಂಜುರಾಜ್, ಹಿರಿಯ ಪ್ರಾಧ್ಯಾಪಕ ಡಾ. ವಸಂತ ನಾಯಕ್ ಟಿ. ಉಪಸ್ಥಿತರಿದ್ದರು. ಕೋಶದ ಸಂಚಾಲಕರಾದ ಡಾ. ಸೌಮ್ಯ ಸ್ವಾಗತಿಸಿದರು. ಕು. ಸೌಂದರ್ಯ ನಿರೂಪಿಸಿದರು.