ಸಿದ್ದರಾಮಯ್ಯ ರಾಜೀನಾಮೆ ನೀಡಲಿ

ಸಿದ್ದರಾಮಯ್ಯ ರಾಜೀನಾಮೆ ನೀಡಲಿ

ದಾವಣಗೆರೆ, ಸೆ.25- ಕಳಂಕ ಹೊತ್ತ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಲ್ಲಿ ಕೂರುವುದು ಶೋಭೆಯಲ್ಲ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರೆದರೆ ಪ್ರಕರಣದ ತನಿಖೆಯಲ್ಲಿ ಹಸ್ತಕ್ಷೇಪ ಆಗುವ ಸಾಧ್ಯತೆ ಇದೆ. ಹಾಗಾಗಿ ಕಳಂಕ ರಹಿತರಾಗಿ ಬಂದು ಮತ್ತೆ ಅಧಿಕಾರ ಸ್ವೀಕರಿಸಲಿ. ಅಲ್ಲಿಯವರೆಗೂ ಅವರು ಅಧಿಕಾರದಲ್ಲಿ ಮುಂದುವರೆಯಬಾರದು ಎಂದು ಹೇಳಿದರು.

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಅವರ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಅದೇ ರೀತಿ ನೀವು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಪಕ್ಷದಲ್ಲೇ ಕೆಲವರು ಕಣ್ಣಿಟ್ಟಿದ್ದಾರೆ ಎಂದ ಅವರು, ಈ ಪಕ್ಷದಲ್ಲಿ ಒಳ ಜಗಳ ಪ್ರಾರಂಭವಾಗಿದೆ. ಆದ್ದರಿಂದ ನೂರಕ್ಕೆ ನೂರು ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆಗ ಅಮಾಯಕ ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾದ ಪ್ರಕರಣ ಇತ್ಯರ್ಥಗೊಳಿಸಲಿದ್ದೇವೆ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆ ಸೂಪರ್ ಸಿಎಂ ಆಗಿದ್ದಾರೆ. ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರ ವಿರುದ್ಧ ಕೂಡ ಭ್ರಷ್ಟಾಚಾರ ಆರೋಪ ಇದೆ ಎಂದರು.

ಹಂಸರಾಜ ಭಾರಧ್ವಾಜ್ ಅವರು ಇರುವಾಗ ರಾಜಭವನದ ಪಾವಿತ್ರ್ಯತೆ ಇತ್ತೇ ಎಂದ ಅವರು, ಯಡಿಯೂರಪ್ಪ ವಿರುದ್ಧ ನೀವು ದ್ವೇಷದ ರಾಜಕಾರಣ ಮಾಡಿದ್ದೀರಿ. ಆದರೆ, ಬಿಜೆಪಿ ಯಾವತ್ತೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ಈ ವೇಳೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್, ಕೊಳೇನಹಳ್ಳಿ ಬಿ.ಎಂ.ಸತೀಶ್, ಮಾಜಿ ಮೇಯರ್ ಬಿ.ಜೆ.ಅಜಯ್ ಕುಮಾರ್, ಮುಖಂಡರಾದ ಧನಂಜಯ್ ಕಡ್ಲೇಬಾಳು, ರಾಜು (ವೀರಣ್ಣ), ಪ್ರವೀಣ್ ಜಾಧವ್‌ ಇದ್ದರು.

error: Content is protected !!