ಹರಪನಹಳ್ಳಿ, ಸೆ. 23- ಪುರಸಭೆ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ಪಟ್ಟಣದಲ್ಲಿ ಐದು ಎಕರೆ ಜಾಗ ಗುರುತಿಸಲಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ಸೋಮವಾರ ಅಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಸೂರು ಕಲ್ಪಿಸಲು ಈಗಾಗಲೇ ಪಟ್ಟಣದಲ್ಲಿ 5 ಎಕರೆ ಜಮೀನು ಕಾಯ್ದಿರಿಸಲಾಗಿದ್ದು, ಆದಷ್ಟು ಬೇಗ ಮನೆ ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.
ನಗರ ಸ್ವಚ್ಛಗೊಳಿಸುವಾಗ ಪೌರಕಾರ್ಮಿಕರು ಮಾಸ್ಕ್, ಗ್ಲೌಸ್, ಜಾಕೇಟ್ ಉಪಯೋಗಿಸಿಕೊಂಡು ತಮ್ಮಗಳ ಆರೋಗ್ಯ ಕಾಪಾಡಿಕೊಳ್ಳಬೇಕು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿನ ಉತ್ತಮ ನಾಗರಿಕರನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.
ಪುರಸಭಾ ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ಮಾತನಾಡಿ, ಪೌರಕಾರ್ಮಿಕರು ದೇಶ ಕಾಯುವ ಸೈನಿಕರಿದ್ದಂತೆ. ಯೋಧರು ಗಡಿ ಕಾಪಾಡಿದರೆ, ಪೌರ ಕಾರ್ಮಿಕರು ಜನರ ಆರೋಗ್ಯ ಕಾಪಾಡುವರು, ಪೌರ ಕಾರ್ಮಿಕರ ವೃತ್ತಿ ವಂಶಪಾರಂಪರ್ಯವಾಗಬಾರದು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ಉನ್ನತ ಹುದ್ದೆಗಳಿಗೆ ಹೋಗವಂತೆ ಮಾಡಿ ಎಂದು ಹೇಳಿದರು.
ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು, ಕ್ಲಿನರ್, ಚಾಲಕರನ್ನು ಪೌರ ಕಾರ್ಮಿಕರೆಂದು ಪರಿಗಣಿಸಬೇಕು, ಜ್ಯೋತಿ ಸಂಜೀವಿನಿ ಯೋಜನೆಯಡಿ ಸೇರಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಪೌರ ಕಾರ್ಮಿಕರ ಪರವಾಗಿ ಶಾಸಕರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.
ಸದಸ್ಯ ಅಬ್ದುಲ್ ರೆಹಮಾನ್ ಮಾತನಾಡಿ, ಪೌರ ಕಾರ್ಮಿಕರು ವೈದ್ಯರಿದ್ದಂತೆ. ಬೆಳಗಿನ ಜಾವ ನಗರವನ್ನು ಸ್ವಚ್ಛ ಮಾಡಿ ಜನತೆಯ ಆರೋಗ್ಯ ಕಾಪಾಡುತ್ತಾರೆ, ಇಂತವರಿಗೆ ಇನ್ನು ಹೆಚ್ಚಿನ ಸೌಲಭ್ಯ ಸಿಗಬೇಕು ಎಂದು ಹೇಳಿದರು.
ಸದಸ್ಯ ಎಸ್.ಜಾಕೀರ್ ಹುಸೇನ್ ಮಾತನಾಡಿ, ಕೊರೋನಾ ಸಮಯದಲ್ಲಿ ಜೀವದ ಹಂಗು ತೊರೆದು ಪೌರ ಕಾರ್ಮಿಕರು ಸೈನಿಕರಂತೆ ಕೆಲಸ ಮಾಡಿದ್ದಾರೆ.ಸರ್ಕಾರ ಅವರಿಗೆ ಹೆಚ್ಚಿನ ಸೌಲಭ್ಯ ನೀಡಬೇಕು, ಪೌರಕಾರ್ಮಿಕರು ದುಶ್ಚಟಕ್ಕೆ ಬಲಿಯಾ ಗದೆ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಪುರಸಭಾ ವ್ಯವಸ್ಥಾಪಕ ಅಶೋಕ ಮಾತನಾಡಿದರು. ಸಿಆರ್ಪಿ ಎಚ್.ಸಲೀಂ ಸ್ವಾಗತಿಸಿ, ನಿರೂಪಿಸಿದರು.
ಪುರಸಭಾ ಸದಸ್ಯರಾದ ಲಾಟಿ ದಾದಾಪೀರ್, ಭರತೇಶ, ಮಂಜುನಾಥ ಇಜಂತಕರ್, ಕೊಟ್ರೇಶ, ಕಿರಣ್ ಶಾನಬಾಗ್, ವಿನಯ ಗೌಳಿ, ಹನುಮವ್ವ, ಶೋಭಾ, ಎಂ.ಕೆ.ಜಾವೀದ್, ಶೆಕ್ಷಾವಲಿ, ವಾಗೀಶ, ಹನುಮಂತಪ್ಪ, ಚಿಕ್ಕೇರಿ ಬಸಪ್ಪ, ಮಲ್ಲೆಪ್ಪ, ಮತ್ತೂರು ಬಸವರಾಜ, ಯುವ ಮುಖಂಡ ಸೈಯದ್ ಇರ್ಫಾನ್ ಸೇರಿದಂತೆ ಇತರರು ಇದ್ದರು.