ಎಸ್.ಎಸ್. ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರದಲ್ಲಿನ ಕಾರ್ಯಕ್ರಮದಲ್ಲಿ ನೇತ್ರ ಚಿಕಿತ್ಸಾ ವೈದ್ಯ ಡಾ. ಅಜಯ್ ಹತ್ತಿ ಕರೆ
ದಾವಣಗೆರೆ, ಸೆ.18- ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿ ಎಂದು ಎಸ್.ಎಸ್. ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರದ ನೇತ್ರ ಚಿಕಿತ್ಸಾ ವೈದ್ಯ ಡಾ. ಅಜಯ್ ಹತ್ತಿ ತಿಳಿಸಿದರು.
ನಗರದ ಎಸ್.ಎಸ್. ವೈದ್ಯಕೀಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ಕಳೆದ ವಾರ ಆಯೋಜಿಸಿದ್ದ `ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮರಣದ ನಂತರ ದೇಹವು ಮಣ್ಣಲ್ಲಿ ಮಣ್ಣಾಗುತ್ತದೆ. ಹಾಗಾಗಿ ಮರಣದ ನಂತರ ನೇತ್ರದಾನ ಮಾಡುವ ಮೂಲಕ ದೇಶದಲ್ಲಿನ ಅಂಧರ ಪ್ರಮಾಣ ಕುಗ್ಗಿಸಿ ಎಂದು ಹೇಳಿದರು.
ಕುರುಡುತನ ಜಗತ್ತನ್ನು ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದೆ. ದೇಶದಲ್ಲಿ 12 ಮಿಲಿಯನ್ ಜನ ಕಾರ್ನಿಯಾ ಅಂಧತ್ವದಿಂದ ಬಳಲುತ್ತಿದ್ದಾರೆ. ಆದರೆ ವರ್ಷಕ್ಕೆ ಕೇವಲ 25 ಸಾವಿರ ನೇತ್ರದಾನ ಆಗುತ್ತಿದೆ ಎಂದರು.
ನೇತ್ರ ಚಿಕಿತ್ಸಾ ವ್ಯೆದ್ಯೆ ಡಾ. ಶಾಂತಲ ಅರುಣಕುಮಾರ್ ಮಾತನಾಡಿ, ಮರಣದ ನಂತರ ಆರೋಗ್ಯವಂತ ಕಣ್ಣು ದಾನ ಮಾಡಿ ದರೆ ಕಾರ್ನಿಯಾ ಕುರುಡುತನದಿಂದ ಬಳಲುವ ವರಿಗೆ ಸಹಾಯಕವಾಗಲಿದೆ ಎಂದರು.
ದೇಶದಲ್ಲಿ ಪ್ರತಿ ವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರ ವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಂಡು ನೇತ್ರದಾನ ಕುರಿತು ಜನರಲ್ಲಿ ಜಾಗೃತಿ ಹಾಗೂ ಪ್ರೇರಣೆ ಮೂಡಿಸುವ ಪ್ರಯತ್ನ ನಡೆಯಿತು ಎಂದು ತಿಳಿಸಿದರು.
ಡಾ. ರೇಣುಕಾ ಬಾರ್ಕಿ ಮಾತನಾಡಿ, ಆರೋಗ್ಯವಂತ ಕಣ್ಣು ಹೊಂದಿರುವ ಯಾರಾದರೂ ವಯಸ್ಸಿನ ಮಿತಿ ಯಿಲ್ಲದೇ ನೇತ್ರದಾನಕ್ಕೆ ಹೆಸರು ನೋಂದಾಯಿಸಬಹುದು ಎಂದು ಹೇಳಿದರು.
ಒಬ್ಬ ವ್ಯಕ್ತಿಯ ಎರಡು ಕಣ್ಣುಗಳಿಂದ ಕನಿಷ್ಠ ಇಬ್ಬರು ಅಥವಾ 4 ಜನ ಅಂಧರಿಗೆ ಬೆಳಕು ನೀಡಬಹುದು ಎಂದು ನೇತ್ರದಾನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಿದರು.
14 ದಿನಗಳ ಕಾಲ ನಡೆದ ನೇತ್ರದಾನ ಜಾಗೃತಿ ಕಾರ್ಯಕ್ರಮದಲ್ಲಿ 20 ಜನರು ನೇತ್ರ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ.
ಈ ವೇಳೆ ವೈದ್ಯಕೀಯ ನಿರ್ದೇಶಕರಾದ ಡಾ.ಎ. ಅರುಣ್ ಕುಮಾರ್, ಡಾ.ಜಿ.ಎಸ್. ಲತಾ, ನೇತ್ರ ತಜ್ಞ ಡಾ.ಪ್ರೀತಿ ಸುರಪುರ ಇತರರು ಇದ್ದರು.