ರಾಣೇಬೆನ್ನೂರು, ಸೆ.18- ದಿನಗಣನೆ ಯಲ್ಲಿರುವ ಶಿಗ್ಗಾಂವ – ಸವಣೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಸವಣೂರು ದೊಡ್ಡಹುಣಸೆಮರ ಮಠದ ಪೀಠಾಧಿಪತಿ ಶ್ರೀ ಚನ್ನಬಸವೇಶ್ವರ ಮಹಾಸ್ವಾಮಿಗಳಿಗೆ ಅವಕಾಶ ನೀಡಬೇಕು ಎಂದು ಕೆಲಭಕ್ತರು, ಅನೇಕ ಸ್ವಾಮೀಜಿಗಳು ಸಹ ವರಿಷ್ಠರಿಗೆ ಒತ್ತಡ ಹಾಕಿರು ವುದಾಗಿ ಗೊತ್ತಾಗಿದೆ.
ಸಂಸತ್‌ಗೆ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದಾಗಿ ಈ ಸ್ಥಾನ ತೆರವಾಗಿದೆ.
ಉತ್ತರ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳು ಅನೇಕ ಸ್ವಾಮೀಜಿಗಳಿಗೆ ಟಿಕೆಟ್ ನೀಡಿವೆ. ಅವರುಗಳಲ್ಲನೇಕರು ಆಯ್ಕೆಯಾಗಿದ್ದಾರೆ. ಹಾಗಾಗಿ ಈ ಉಪಚುನಾವಣೆಗೆ ಚನ್ನಬಸವೇಶ್ವರ ಶ್ರೀಗಳಿಗೆ ಟಿಕೆಟ್ ನೀಡುವಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ನೂರಕ್ಕೂ ಅಧಿಕ ಶ್ರೀಗಳು ಒತ್ತಡ ತರುತ್ತಿದ್ದಾರೆಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷ ಹಿಂದೂಗಳ ವಿರೋಧಿ ಎನ್ನುವ ಭಾವನೆ ಜನರಲ್ಲಿ ಬಿಂಬಿತವಾಗಿದ್ದು, ಈ ಚುನಾವಣೆಗೆ ಸವಣೂರು ಶ್ರೀಗಳಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಪಕ್ಷ ಹಿಂದೂಗಳ ಪರವಾಗಿದೆ ಎಂಬುದನ್ನು ಸಾಬೀತು ಪಡಿಸುವಂತೆ ಕೆಲ ಮಠಾಧೀಶರು ಕಾಂಗ್ರೆಸ್ ಮುಖಂಡರಾದ ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಸಂತೋಷ್ ಲಾಡ್ ಹಾಗೂ ವಿನಯ ಕುಲ್ಕರ್ಣಿ ಅವರಿಗೆ ತೀವ್ರತರದ ಒತ್ತಡ ತರುತ್ತಿದ್ದಾರೆಂದು ಗೊತ್ತಾಗಿದೆ.
ಬಿಜೆಪಿಯ ಕೆಲ ಕಾರ್ಯಕರ್ತರು ಸಹ ಸವಣೂರು ಸ್ವಾಮೀಜಿಗಳಿಗೆ ಟಿಕೆಟ್ ನೀಡುವಂತೆ ತಮ್ಮ ಪಕ್ಷದ ಮುಖಂಡರಲ್ಲಿ ಅಹವಾಲು ಇಟ್ಟಿದ್ದಾರೆಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಪಕ್ಷ ಟಿಕೆಟ್ ನೀಡಿದರೆ ಮಾತ್ರ ಸ್ಪರ್ಧಿಸುವೆ, ಪಕ್ಷೇತರ ಸ್ಪರ್ಧೆಯ ಇಚ್ಛೆಯಿಲ್ಲ ಎಂದು ಚನ್ನಬಸವೇಶ್ವರ ಶ್ರೀಗಳು ಅನೇಕರೆದುರು ಪ್ರತಿಕ್ರಿಯಿಸಿದ್ದಾರೆಂದು ಮೂಲಗಳು ತಿಳಿಸಿವೆ