ಹರಪನಹಳ್ಳಿ, ಸೆ. 17 – ಪಟ್ಟಣದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ರಾಜ ಸೋಮಶೇಖರನಾಯಕ ವೃತ್ತ, ಹರಿಹರ-ಹೊಸಪೇಟೆ ಮುಖ್ಯ ರಸ್ತೆಯ ಮೂಲಕ ಹೊಸ ಬಸ್ ಸ್ಟ್ಯಾಂಡ್, ಹಳೇಬಸ್ ಸ್ಟ್ಯಾಂಡ್, ಪ್ರವಾಸಿ ಮಂದಿರ ವೃತ್ತದ ಮೂಲಕ ನಾಯಕನ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಸುತ್ತಮುತ್ತ ಗ್ರಾಮಗಳ ಸಾವಿರಾರು ಯುವಕರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.
ಯುವಕ, ಯುವತಿಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಭವ್ಯ ಮೆರವಣಿಗೆಗೆ ಸಾಕ್ಷಿಯಾದರು. ರಸ್ತೆ ಯುದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮೆರವಣಿಗೆಯಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಜೊತೆಗೆ ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದ ತಂಡ ಸಹ ಎಲ್ಲಿಯೂ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದರು. ಇನ್ನು ಒಳ ಬರುವ ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂಬೂಗಳಿಂದ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು.