ಮೂಡಲಪಾಯ ತರಬೇತಿ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ಪುಟ್ಟಸ್ವಾಮಿ
ಹರಪನಹಳ್ಳಿ, ಸೆ.17- ಯಕ್ಷಗಾನ ಕಲೆಗೆ ತನ್ನದೇ ಆದ ಸಾಹಿತ್ಯದ ನೆಲೆ ಇದೆ ಮತ್ತು ದೊಡ್ಡ ಚರಿತ್ರೆಯನ್ನೇ ಹೊಂದಿದೆ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಆದರ್ಶ ಮಹಿಳಾ ಮಂಡಳಿ ಹಾಗೂ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಮೂಡಲಪಾಯ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.
ಯಕ್ಷಗಾನದಿಂದ ಬುದ್ದಿ ಚುರುಕುಗೊಳ್ಳುತ್ತದೆ. ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ, ಪಡುವಲಪಾಯ-ಪ್ರಸಂಗ ಸಾಹಿತ್ಯ, ಮೂಡಲಪಾಯ -ಪ್ರಸಂಗ ಸಾಹಿತ್ಯ, ಯಕ್ಷಗಾನದಲ್ಲಿ ಪ್ರಯೋಗ ಶೀಲತೆ, ಮೌಖಿಕ ಸಾಹಿತ್ಯ, ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು- ಹೀಗೆ ಒಟ್ಟು ಏಳು ಅಧ್ಯಾಯಗಳಲ್ಲಿ ಸಾಗುವ ಈ ಕೃತಿ ಯಕ್ಷಗಾನದ ಒಟ್ಟು ಸ್ವರೂಪವನ್ನು ಒಂದೇ ತೆಕ್ಕೆಗೆ ಪರಿಚಯಿಸಿಬಿಡುತ್ತದೆ ಎಂದರು.
ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಬಿ.ಪರುಶುರಾಮ ಪ್ರಸ್ತಾವಿಕವಾಗಿ ಮಾತನಾಡಿ, ಭಾವ, ರಾಗ, ತಾಳದಿಂದ ಮನುಷ್ಯ ಪರಿಪೂರ್ಣ ನಾಗುತ್ತಾನೆ. ಮೂಡಲಪಾಯ ನಾಟಕ, ದೊಡ್ಡಾಟಗಳಿಂದ ಮನುಷ್ಯ ಪರಿಶುದ್ಧ ರಾಗುತ್ತಾನೆ ಎಂದರು.
ಆದರ್ಶ ಮಹಿಳಾ ಮಂಡಳಿ ಅಧ್ಯಕ್ಷರಾದ ಮೈದೂರು ಶಿಲ್ಪಾ ಮಾತನಾಡಿ, ಯಾವುದೇ ಪಾತ್ರ ಮಾಡಿದರೂ ಕೂಡ ನಾವು ಪರಕಾಯ ಪ್ರವೇಶ ಮಾಡಿದರೆ ಉತ್ತಮ ಅಭಿನಯ ಮಾಡಬಹುದು. ಶಿಕ್ಷಣದ ಜೊತೆ ಕಲೆ, ಸಾಹಿತ್ಯ, ಸಂಗೀತ ಕ್ರೀಡೆಗಳಲ್ಲಿ ಭಾಗವಹಿಸಿದರೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದರು.
ಮುಖ್ಯ ಶಿಕ್ಷಕ ಚೇತನ್ ಬಣಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ ಸಾಹಿತ್ಯದಲ್ಲಿ ಆರತಿ ಹಾಡು, ಸೋಬಾನೆ ಹಾಡುಗಳ ಚೆಲುವು, ಗಾದೆ ಮಾತು, ಭಾಷಾ ಪ್ರಯೋಗದ ಸೌಂದರ್ಯ, ಭಾವಗೀತಾತ್ಮಕತೆ, ಮಾರ್ಗ-ದೇಸಿಗಳ ಸಮ್ಮಿಶ್ರ ಸೌಂದರ್ಯ, ಶಬ್ದಾಲಂಕಾರ, ಅರ್ಥಾಲಂಕಾರಗಳ ಬೆಡಗು, ರೂಪಕ-ಪ್ರಹೇಲಿಕೆಗಳ ಮೆರವಣಿಗೆ ಹೇಗೆ ಪ್ರಭಾವಿಸಿವೆ ಎಂಬುದನ್ನು ಚರ್ಚಿಸಲಾಗಿದೆ. ಎಲ್ಲವನ್ನೂ ಹೀರಿಕೊಂಡು ಅದು ಹೇಗೆ ಶ್ರೀಮಂತವಾಯಿತು ಮತ್ತು ಅವೆಲ್ಲವೂ ಯಕ್ಷಗಾನ ಸಾಹಿತ್ಯದಲ್ಲಿ ಹೇಗೆ ನಿಹಿತವಾಗಿದ್ದವು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಉಪನ್ಯಾಸಕರಾದ ಆನಂದ ಕರುವಿನ, ಶಿಕ್ಷಕರಾದ ಹೊನ್ನಪ್ಪ, ಟಿ. ಶಶಿಕಲಾ, ಡಿ. ಮಾಲವಿ ಹಿರೇಮಠ್, ಸುಧಾ ಜಿ, ಶರಣಮ್ಮ ಕೆ, ಶಶಿಕಲಾ ಎಂ ಸೇರಿದಂತೆ ಇತರರು ಇದ್ದರು.