ಬುದ್ಧನೇ ಬಹುದೊಡ್ಡ ದುಃಖ ಪರಿಹಾರ ವಿಜ್ಞಾನಿ

ಬುದ್ಧನೇ ಬಹುದೊಡ್ಡ ದುಃಖ ಪರಿಹಾರ ವಿಜ್ಞಾನಿ

ದಾವಣಗೆರೆ, ಸೆ.17- ಬುದ್ಧ ಬಹುದೊಡ್ಡ ದುಃಖ ಪರಿಹಾರ ವಿಜ್ಞಾನಿ. ಈತ ಸಾರ್ವಕಾಲಿಕ ಭವರೋಗಗಳ ವೈದ್ಯ. ಈತನ ಮಾತುಗಳು ಅಂದು, ಇಂದು, ಎಂದೂ ಪರಮಸತ್ಯವಾಗಿವೆ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ  ಬಸವಲಿಂಗಪ್ಪ ಅಭಿಪ್ರಾಯಿಸಿದರು. 

ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವೇಕ್  ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ `ಮಹಾರೋಗಗಳು ಮತ್ತು ದಿವ್ಯ ಔಷಧಿಗಳು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಬುದ್ಧನದು ಮಧ್ಯಮ ಮಾರ್ಗ. ಆತ ಎಲ್ಲಾ `ಅತಿ’ಗಳನ್ನು ಅಲ್ಲಗಳೆದ. ಆತ ಬೋಧಿಸಿದ್ದು ಅಷ್ಟಾಂಗ ಮಾರ್ಗಗಳಾದ  ಸರಿಯಾದ ದೃಷ್ಟಿ, ಸರಿಯಾದ ಸಂಕಲ್ಪ, ಸರಿಯಾದ ಮಾತು, ಸರಿಯಾದ ಕಾರ್ಯ, ಸರಿಯಾದ ಉದ್ದೇಶ, ಸರಿಯಾದ ಪ್ರಯತ್ನ, ಸರಿಯಾದ ಜಾಗ್ರತೆ, ಸರಿಯಾದ ಏಕಾಗ್ರತೆ. ಆದರೆ  ನಮ್ಮನ್ನು  ಸದಾ ಕಾಡುವ ಮಹಾರೋಗಗಳಾದ ಅಹಂಕಾರ,  ಭ್ರಮೆ, ದುರಾಸೆ, ದ್ವೇಷ, ಹೊಟ್ಟೆಕಿಚ್ಚಿನಂತಹ    ರೋಗಗಳಿಗೆ  ಯಾವ ವೈದ್ಯರು ಪರಿಹಾರ ನೀಡುವುದಿಲ್ಲ. ಸತ್ಯ, ಸಮಚಿತ್ತತೆ, ಪ್ರೀತಿ, ಏಕತೆ, ಎಚ್ಚರ ಮತ್ತು ವಿವೇಕಗಳಿಂದ  ನಾವೇ ಸ್ವತಃ ವೈದ್ಯರಾಗಿ, ನಮ್ಮ ರೋಗಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆಯ ಪ್ರತಿಯೊಬ್ಬರೂ ಸ್ವಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಿ ಹಚ್ಚ ಹಸಿರಾಗಿಸೋಣ.   40 ವರ್ಷಗಳ ಹಿಂದೆ   ಆ ಕೆಲಸ ಮಾಡಿರುವ  ಪಂಪಾಪತಿ ಅವರನ್ನು ಕೃತಜ್ಞತೆಯಿಂದ ಸ್ಮರಿಸಿ ಅವರು ಅಂದು ಗಿಡಮರ ಬೆಳೆಸಿದ ಸತ್ಕಾರ್ಯವನ್ನು ನಾವೆಲ್ಲರೂ ಇಂದು ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಹೇಳಿದರು.

 ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ ಎಂಬ ಮಹಾಮಾರಿ ಯುವ ಜೀವಗಳ ಹರಣ ಮಾಡುವುದಲ್ಲದೇ ಸದ್ಯ ಅವರಲ್ಲಿರುವ ಕಿಂಚಿತ್ತೂ ನೈತಿಕ ಪ್ರಜ್ಞೆ, ಭಯ, ತಪ್ಪಿತಸ್ಥ ಮನೋಭಾವನೆ ಗಳೆಂಬ `ವಿವೇಕ’  ಕಿತ್ತೆಸೆಯುತ್ತಿದೆ. ಇದರ ಬಗ್ಗೆ ಯುವ ಜನತೆ ಮತ್ತು ಇವರ ತಂದೆ ತಾಯಿಗಳು ಎಚ್ಚೆತ್ತುಕೊಳ್ಳಬೇಕು.  ಸಮಾಜ ದುಶ್ಚಟಗಳ ಹಾವಳಿಯಿಂದ ನಿರ್ನಾಮವಾಗುವುದನ್ನು ತಡೆದು,   ಆನಂದ, ಆರೋಗ್ಯ, ಆತ್ಮವಿಶ್ವಾಸದ ಸುಂದರ, ಭವ್ಯ ಸಮಾಜವಾಗಿ ನಿರ್ಮಾಣ ಮಾಡುವುದು ನಮ್ಮೆಲ್ಲರ, ಪ್ರಮುಖವಾಗಿ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು. 

ಬಾಪೂಜಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ.ಜಿ.ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಜನತೆ ಗುಟ್ಕಾ, ಧೂಮಪಾನ ಮತ್ತು ಮದ್ಯಪಾನ ಚಟಕ್ಕೆ ಬಿದ್ದು ಹಣ, ಆರೋಗ್ಯ ಮತ್ತು ಚಾರಿತ್ರ್ಯವನ್ನು ಹಾಳುಮಾಡಿಕೊಂಡು ಸಾವಿನ ಕಡೆ ಸಾಗುತ್ತಿರುವುದು ನೋವಿನ ಸಂಗತಿಯಾಗಿದೆ ಇದನ್ನು ತಡೆಯುವ ಪ್ರಯತ್ನ ಆಗಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಕೌಜಲಗಿ, ಡಾ.ಸುರೇಶ್ ಬಾಬು, ಡಾ.ಮೃತ್ಯುಂಜಯ ಸೇರಿದಂತೆ  ಇತರರು ಭಾಗವಹಿಸಿದ್ದರು.

error: Content is protected !!