ಶಸಾಪ ವಾರ್ಷಿಕ ಸಭೆಯಲ್ಲಿ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ
ದಾವಣಗೆರೆ, ಸೆ.15- ಕನ್ನಡ ಸಾಹಿತ್ಯ ಲೋಕಕ್ಕೆ ವಿಶ್ವ ಮಾನ್ಯತೆ ತಂದು ಕೊಟ್ಟದ್ದು ವಚನ ಸಾಹಿತ್ಯ. ಇದು ಸರ್ವರಿಗೂ ಲೇಸು ಬಯಸುವ, ಬದುಕಿಗೆ ಸರಿಯಾದ ಮಾರ್ಗದರ್ಶನ ಮಾಡಿ ಜೀವನಕ್ಕೆ ಭದ್ರ ಬುನಾದಿ ಹಾಕಿ ಕೊಡಲಿದೆ ಎಂದು ಗದಗದ ತೋಂಟದಾರ್ಯ ಮಠದ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ನುಡಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 30ನೇ ಸರ್ವ ಸದಸ್ಯರ ವಾರ್ಷಿಕ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಪರಿಷತ್ತಿನ ಪದಾಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಆಗ ಮಾತ್ರ ಸಂಘಟನೆ ಅಭಿವೃದ್ಧಿ ಯಾಗಿ ಕನ್ನಡದ ಕಣ್ಮಣಿಯಾಗಲಿದೆ. ಜನರಿಗೆ ಬೆಳಕು ನೀಡುವ ವಚನ ಸಾಹಿತ್ಯವನ್ನು ಜನ ಮನಕ್ಕೆ ತಲುಪಿಸುವ ಕೈಂಕರ್ಯವನ್ನು ಶರಣ ಸಾಹಿತ್ಯ ಪರಿಷತ್ ಪದಾಧಿ ಕಾರಿಗಳು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯ ಲೋಕದಿಂದ ಶರಣ ಸಾಹಿತ್ಯವನ್ನು ಬೇರ್ಪ ಡಿಸಿದರೆ, ಕನ್ನಡ ಸಾಹಿತ್ಯದಲ್ಲಿ ಏನೂ ಉಳಿಯುವುದಿಲ್ಲ ಎಂದ ಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್ತು ಪ್ರಸ್ತುತ 15 ಸಾವಿರ ಸದಸ್ಯತ್ವವನ್ನು ಹೊಂದಿದೆ. ಬರುವ ವಾರ್ಷಿಕ ಸಭೆಯ ಹೊತ್ತಿಗೆ ಅದು 30 ಸಾವಿರ ದಾಟುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ನಡೆಸುವಂತೆ ಹೇಳಿದರು.
ಗೋ.ರು. ಚನ್ನಬಸಪ್ಪನವರು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿದ್ದಾಗ `ಒಬ್ಬ ಕನ್ನಡಿಗ ಒಂದು ರೂಪಾಯಿ’ ಘೋಷ ವಾಕ್ಯದೊಂದಿಗೆ ಆ ಸಂಸ್ಥೆಗೆ ಹೆಚ್ಚಿನ ಸದಸ್ಯರನ್ನು ಮಾಡಿಸಿದ್ದರು. ಈ ಸೂತ್ರವನ್ನು ನಮ್ಮ ಶರಣ ಸಾಹಿತ್ಯ ಪರಿಷತ್ತೂ ಅನುಸರಿಸಿದರೆ ಸದಸ್ಯತ್ವವನ್ನು ಹೆಚ್ಚಿಸಬಹುದು.
– ಶ್ರೀ ಗುರುಬಸವ ಸ್ವಾಮೀಜಿ, ಪಾಂಡೋಮಟ್ಟಿ
ಸಭೆಯ ನಿರ್ಣಯಗಳು
- ವಿಶ್ವವಿದ್ಯಾನಿಲಯಗಳಲ್ಲಿರುವ ಬಸವ ಪೀಠಗಳಿಗೆ ವಾರ್ಷಿಕ ತಲಾ 50 ಲಕ್ಷ ರೂ. ಅನುದಾನ ಒದಗಿಸಬೇಕು.
- ಜಿಲ್ಲಾಡಳಿತಗಳಿಂದ ಆಯೋಜಿಸುವ ಶರಣ ಜಯಂತಿಗೆ ಆಯಾ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಆಹ್ವಾನಿಸಬೇಕು
- ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶರಣರ ಕುರಿತು ಗೋಷ್ಠಿಗಳನ್ನು ಆಯೋಜಿಸಬೇಕು.
ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಅತ್ಯಂತ ಪಾರದರ್ಶಕವಾಗಿರುವ ಸಂಸ್ಥೆಯಾಗಿದೆ ಎಂದು ಶ್ಲ್ಯಾಘಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿಗಿಂತಲೂ ಪರಿಣಾಮಕಾರಿ ಯಾಗಿ ಶರಣ ಸಾಹಿತ್ಯ ಪರಿಷತ್ ಕಾರ್ಯ ನಿರ್ವಹಿ ಸುತ್ತಿದೆ. ಇಲ್ಲಿ ಸ್ವಾರ್ಥಿಗಳಿಗೆ ಅವಕಾಶವಿಲ್ಲ ಎಂದರು.
ಶರಣ ಸಾಹಿತ್ಯ ಪರಿಷತ್ ಕೇವಲ ರಾಜ್ಯಕ್ಕೆ ಸೀಮಿತವಾಗಿರದೆ, ದೇಶದ ಹೊರ ರಾಜ್ಯಗಳಲ್ಲೂ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸಿಕೊಂಡಿದೆ. ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಕದಳಿ ವೇದಿಕೆ ಅಧ್ಯಕ್ಷರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ನಾಡೋಜ ಗೋ.ರು. ಚನ್ನಬಸಪ್ಪ, ಮಾಜಿ ಸಚಿವ ರಾದ ಎಸ್.ಎಸ್. ಪಾಟೀಲ್, ಲೀಲಾದೇವಿ ಆರ್. ಪ್ರಸಾದ್, ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಪದಾಧಿಕಾರಿಗಳಾದ ಹಂಪಯ್ಯ, ರವೀಶ್ ಕ್ಯಾತನ ಬೀಡು, ಪ್ರಕಾಶ್ ಅಂಗಡಿ, ಶಿವರಾಜ್ ಕಬ್ಬೂರು ಸೇರಿ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಡಾ.ಸಿ.ರಾ. ಹೊನ್ನಲಿಂಗಯ್ಯ ಸ್ವಾಗತಿಸಿದರು. ಕದಳಿ ವೇದಿಕೆ ಮಹಿಳಾ ಸದಸ್ಯರು ಪ್ರಾರ್ಥಿಸಿದರು ಭರಮಪ್ಪ ಮೈಸೂರು ಕಾರ್ಯಕ್ರಮ ನಿರೂಪಿಸಿದರು.