`ಎ’ ಶ್ರೇಣಿಯಲ್ಲಿ ಮುನ್ನಡೆ : ಸಂಘದ ಅಧ್ಯಕ್ಷ ಬಿ.ಸುರೇಶ್ ಹಾಲೇಕಲ್ಲು ಹರ್ಷ
ದಾವಣಗೆರೆ,ಸೆ.15- 2023-24ನೇ ಸಾಲಿನಲ್ಲಿ 28 ಲಕ್ಷ ರೂ. ನಿವ್ವಳ ಲಾಭಗಳಿಸುವ ಮೂಲಕ ದಿ ವೆಜಿಟಬಲ್ ಪ್ಲಾಂಟ್ ಸೌಹಾರ್ದ ಸಹಕಾರಿ ಸಂಘವು `ಎ’ ವರ್ಗದ ಶ್ರೇಣಿಯಲ್ಲಿ ಮುನ್ನಡೆದಿದೆ ಎಂದು ಸಂಘದ ಅಧ್ಯಕ್ಷ ಬಿ.ಸುರೇಶ್ ಹಾಲೇಕಲ್ಲು ಹರ್ಷ ವ್ಯಕ್ತಪಡಿಸಿದರು.
ನಗರದ ಜಯದೇವ ಸರ್ಕಲ್‌ನಲ್ಲಿರುವ ಶಂಕರ ಮಠದಲ್ಲಿ ಇಂದು ಜರುಗಿದ ಸಂಘದ 8ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಷೇರುದಾರರು ಹಾಗೂ ಆಡಳಿತ ಮಂಡಳಿಯವರ ಉತ್ತಮ ಸಹಕಾರದಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ.ಮುರುಗೇಶ್ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಸಹಕಾರಿ ಅಭಿವೃದ್ಧಿಗೆ ಹಲವಾರು ಸಲಹೆಗಳನ್ನು ನೀಡಿದರು.
1128 ಸದಸ್ಯರನ್ನು ಹೊಂದಿರುವ ನಮ್ಮ ಸಹಕಾರಿಯು 18.33 ಷೇರು ಬಂಡವಾಳ ಹೊಂದಿದೆ. 7.75 ಕೋಟಿ ರೂ.ಠೇವಣಿ ಸಂಗ್ರಹಿಸಿದ್ದು, 6.19 ಕೋಟಿ ರೂ. ಸಾಲ ನೀಡಲಾಗಿದೆ. 9.30 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, ಈ ಬಾರಿ 28.03 ಲಕ್ಷ ರೂ. ಲಾಭ ಗಳಿಸಿರುವುದಾಗಿ ವರದಿ ಮಂಡಿಸಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಆರ್.ವೆಂಕಟಚಲ ಮೂರ್ತಿ ತಿಳಿಸಿದರು.
ಸಂಘದ ಅಭಿವೃದ್ಧಿಗೆ ಕಾರಣರಾದ ಸದಸ್ಯರನ್ನು, ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ ಸದಸ್ಯರನ್ನು ಮತ್ತು ಪಿಗ್ಮಿ ಸಂಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಕಾರಿ ಉಪಾಧ್ಯಕ್ಷ ಜೆ.ಕೆ.ಶಿವಕುಮಾರ್, ನಿರ್ದೇಶಕರಾದ ಕೆ.ಹೆಚ್ ಶಿವಯೋಗಪ್ಪ, ಎನ್ ರಾಜಣ್ಣ, ಹೆಚ್.ಬಿ ಮಂಜುನಾಥ್, ಟಿ.ಮಹಾಂತೇಶ್, ಎಂ.ಹೆಚ್.ರಾಜಪ್ಪ, ಮಲ್ಲಿಕಾರ್ಜುನ್ ಪಿ.ವಾಲಿ, ಆಶಾ ಕೃಷ್ಣಮೂರ್ತಿ ಮತ್ತು ಹೆಚ್.ಟಿ ಶ್ವೇತಾ ಉಪಸ್ಥಿತರಿದ್ದರು.
ವಂದನಾ ಪ್ರಾರ್ಥಿಸಿದರು. ನಿರ್ದೇಶಕ ಆರ್.ಎನ್ ಮಾರುತಿ ಸ್ವಾಗತಿಸಿದರು. ನಿರ್ದೇಶಕ ಎಸ್.ವಿ ರುದ್ರಮುನಿ ವಂದಿಸಿದರು.
ಚೈತ್ರಾ ನಿರೂಪಿಸಿದರು. ಸಿಬ್ಬಂದಿ ವರ್ಗದ ಅರವಿಂದ, ವೀರೇಂದ್ರ, ಪರಶುರಾಮ್ ಮತ್ತು ಪಿಗ್ಮಿ ಸಂಗ್ರಹಕಾರರು ಹಾಜರಿದ್ದರು.