ಮಲೇಬೆನ್ನೂರು, ಸೆ.10- ಜೀವನದ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಅಬ್ದುಲ್ ಖಾದರ್ ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಮೀಪದ ಹೊಳೆಸಿರಿಗೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ `ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದೆಲ್ಲೆಡೆ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನವೆಂದು ಆಚರಿಸಲಾಗುತ್ತದೆ. ಪ್ರಪಂಚದಲ್ಲಿ ವರ್ಷಕ್ಕೆ 7ಲಕ್ಷ ಜನ ಮತ್ತು ದೇಶದಲ್ಲಿ 1ಲಕ್ಷಕ್ಕೂ ಅಧಿಕ ಜನ ಸಾವನ್ನಪ್ಪುತ್ತಿದ್ದು, ಇದರಲ್ಲಿ ನೂರಕ್ಕೆ ಒಬ್ಬರು ಮಾತ್ರ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಿದರು.
ಕುಟುಂಬಸ್ಥರು, ಸ್ನೇಹಿತರು ಹಾಗೂ ನಂಬಿಕಸ್ತರ ಬಳಿ ಮನಸ್ಸಿನ ನೋವು ಹಾಗೂ ಸಮಸ್ಯೆ ಕುರಿತು ಮಾತನಾಡಿದರೇ ಆತ್ಮಹತ್ಯೆಯ ಆಲೋಚನೆಗಳಿಂದ ದೂರ ಉಳಿಯಬಹುದು ಎಂದು ಹೇಳಿದರು.
ಯಾರೊಂದಿಗೂ ಹಂಚಿಕೊಳ್ಳಲಾಗದ ವಿಷಯಗಳಿದ್ದರೆ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಅಥವಾ ಮಾನಸಿಕ ಆರೋಗ್ಯ ಸಹಾಯವಾಣಿ 14416ಗೆ ಕರೆ ಮಾಡಿ ಸಮಸ್ಯೆಯಿಂದ ಹೊರಬರುವಂತೆ ಹೇಳಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಮಾತನಾಡಿ, ಮೊಬೈಲ್ ಗೀಳು ಮತ್ತು ಮಾದಕ ದ್ರವ್ಯ ವ್ಯಸನಕ್ಕೆ ತುತ್ತಾದ ಯುವಕರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಇಂತಹ ಆತ್ಮಹತ್ಯೆ ಪ್ರವೃತ್ತಿ ಹೋಗಲಾಡಿಸಲು ಸಕಾರಾತ್ಮಕ ಯೋಚನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಡಾ. ಚೇತನ್ ಮಾತನಾಡಿ, ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯ ಆಲೋಚನೆಗಳನ್ನು ಆತನ ಸ್ನೇಹಿತರೇ ಬದಲಾಯಿಸಲು ಮುಂದಾದರೆ ಆತ್ಮಹತ್ಯೆ ಪ್ರಮಾಣ ತಗ್ಗಿಸಬಹುದು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಶೀಲಾ ಮಾತನಾಡಿ, ದೇಶಕ್ಕೆ ಯುವಕರ ಕೊಡುಗೆ ಬಹುದೊಡ್ಡದು. ಆದ್ದರಿಂದ ಆತ್ಮಹತ್ಯೆಯ ಯೋಚನೆಯಿಂದ ದೂರ ಇರುವಂತೆ ತಿಳಿಸಿದರು.
ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.