ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ವಿವೇಕಾನಂದಾಶ್ರಮದ ಪ್ರಕಾಶಾನಂದ ಮಹಾರಾಜರ ವ್ಯಾಕುಲತೆ
ರಾಣೇಬೆನ್ನೂರು, ಸೆ. 9- ಪ್ರಾರಂಭದಲ್ಲಿ ಕುತೂಹಲಕ್ಕೆ ನೋಡುವ ಮೊಬೈಲ್ ಬಳಕೆ ಹವ್ಯಾಸವಾಗುತ್ತೆ. ಅದರಲ್ಲಿನ ಮನಸ್ಸು ವಿಕಾರಗೊಳ್ಳುವ ಸಂದೇಶಗಳು ಇಂದಿನ ಮಕ್ಕಳನ್ನು ಹಿಡಿದಿಡುತ್ತವೆ. ಹಾಗಾಗಿ ಇಂದು ದೇಶದಾದ್ಯಂತ ಅಪರಾಧಗಳು ಹೆಚ್ಚುತ್ತಿವೆ ಎಂದು ವಿವೇಕಾನಂದಾಶ್ರಮದ ಪ್ರಕಾಶಾನಂದ ಮಹಾರಾಜರು ತೀವ್ರ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ರಾಣೇಬೆನ್ನೂರು ಕಾ ರಾಜಾ 16 ನೇ ಗಣೇಶೋತ್ಸವದ ನವದುರ್ಗೆಯರ ವೈಭವ ಉದ್ಘಾಟನೆ ಹಾಗೂ ಪ್ರಾತ: ಸ್ಮರಾಮಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಸಂಘ-ಸಂಸ್ಥೆ, ಮಾಧ್ಯಮಗಳು, ಜನಪ್ರತಿನಿಧಿಗಳು ಗಣೇಶೋತ್ಸವದ ಜೊತೆಗೆ ಸಮಾಜಕ್ಕೆ ಮಾದರಿ ಆಗಿರುವ ಹುತಾತ್ಮರ, ಆದರ್ಶ ವ್ಕಕ್ತಿಗಳ ನಡೆ-ನುಡಿ, ಅವರ ಬದುಕು ಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನ ಸಂಘಟಿಸುವುದ ರೊಂದಿಗೆ ಇಂದಿನ ಯುವಶಕ್ತಿಯನ್ನು ಸರಿದಾರಿಗೆ ತರುವುದರ ಜೊತೆಗೆ ದೇಶಾಭಿಮಾನ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಪ್ರಕಾಶಾನಂದ ಮಹಾರಾಜರು ನುಡಿದರು.
ಸ್ವಾತಂತ್ರ್ಯ ಸಂಗ್ರಾಮದ ಮಹಾ ಯಜ್ಞದಲ್ಲಿ ಶ್ರೀ ಗಂಧದಂತೆ ತಮ್ಮನ್ನ ತಾವು ತೇಯ್ದುಕೊಂಡ ಅದೆಷ್ಟೋ ತಾಯಂದಿರ ಕುರಿತು ನಮ್ಮ ಇತಿಹಾಸ ಬೆಳಕು ಬೀರಲು ಆಗಿಲ್ಲ. ನನಗೆ ಲಭ್ಯ ವಾದವುಗಳನ್ನು ಈ ಪುಸ್ತಕದ ಮೂಲಕ ಸಮಾಜಕ್ಕೆ ಸಲ್ಲಿಸಿದ್ದೇನೆ. ನನ್ನ ಪ್ರಯತ್ನಕ್ಕೆ ಸಮಾಜ ಸುಧಾರಣೆಯ ಧ್ಯೇಯದ ವಂದೇಮಾತರಂ ಸಂಸ್ಥೆಯ ಪ್ರಕಾಶ ಬುರುಡಿಕಟ್ಟಿ ಅವರು ಸಂಪೂರ್ಣ ಜೊತೆಯಾಗಿದ್ದಾರೆ ಎಂದು ಸಂಪಾದಕ ಎಂ.ಎಸ್.ರಾಘವೇಂದ್ರ ಹೇಳಿದರು.
ಸುಗಮವಲ್ಲದ ಸಂಸ್ಥೆಯ ಹೋರಾಟದ ಪರಿಚಯ ಹಾಗೂ ಇದುವರೆಗೂ ಸಂಸ್ಥೆ ಹಾಕಿಕೊಂಡ ಜನಪರ ಚಿಂತನೆಗಳ ಸಂಕ್ಷಿಪ್ತ ಮಾಹಿತಿಯನ್ನು ವಂದೇ ಮಾತರಂ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ವಿವರಿಸಿದರು.
ಸಹ ಸಂಪಾದಕ ಪ್ರೇಮಕುಮಾರ ಬಿದರಕಟ್ಟಿ, ಸಾಹಿತಿ ಪ್ರಮೋದ ನಲವಾಗಲ, ನಗರಸಭೆ ಮಾಜಿ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.