ಸತತ ಪ್ರಯತ್ನ, ಶ್ರದ್ಧೆ ಇದ್ದರೆ ಸಾಧನೆ ಸಾಧ್ಯ

ಸತತ ಪ್ರಯತ್ನ, ಶ್ರದ್ಧೆ ಇದ್ದರೆ ಸಾಧನೆ ಸಾಧ್ಯ

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಶಿಕ್ಷಕರ ದಿನಾಚರಣೆಯಲ್ಲಿ ಐರನ್‌ಮ್ಯಾನ್‌ ಪ್ರಶಸ್ತಿ ಪುರಸ್ಕೃತ  ನಟರಾಜ್‌ ಪರಾವರ್‌

ದಾವಣಗೆರೆ, ಸೆ. 5 – ಯಾವುದೇ ಸಾಧನೆಗೆ ವಯಸ್ಸು ಎಂಬುದು ಅಡ್ಡಿ ಬರುವುದಿಲ್ಲ. ಗುರಿಯನ್ನು ನಿಗದಿಪಡಿಸುವುದು ಉತ್ತಮ ಎಂದು ತಮ್ಮ 50ನೇ ವಯಸ್ಸಿನಲ್ಲಿ ಟ್ರಯಥ್ಲಾನ್‌ ಕ್ರೀಡೆಯಲ್ಲಿ ಐರನ್‌ಮ್ಯಾನ್‌ ಪ್ರಶಸ್ತಿಯನ್ನು ಪಡೆದ ನಗರದವರೇ ಆದ ನಟರಾಜ್‌ ಪರಾವರ್‌ ಅವರು ಪ್ರತಿಪಾದಿಸಿದರು.

ಸ್ಥಳೀಯ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯಲ್ಲಿ ಇಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕ್ರೀಡಾ ಮನೋಭಾವನೆ ಬಿತ್ತಿದ ಪ್ರೌಢಶಾಲೆಯ ಶಿಕ್ಷಕರಾದ ಹೇಮಾನಾಯ್ಕ ಅವರನ್ನು ನೆನೆದರು. ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಜೀವನದ ಎಲ್ಲಾ ಶಿಕ್ಷಕರನ್ನು ನೆನೆದರು. ಅಮೇರಿಕಾದಲ್ಲಿ ನೆಲೆಿಸಿದ್ದರೂ ಸುಸ್ಪಷ್ಟವಾಗಿ ಕನ್ನಡದಲ್ಲಿ ಅರಳು ಹುರಿದಂತೆ ಅವರು ಮಾತನಾಡಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದವನ್ನು ನಡೆಸಿದರು. 

ಮತ್ತೋರ್ವ ಅತಿಥಿಯಾಗಿದ್ದ ಹಿರಿಯ ರಂಗಕರ್ಮಿ – ಕಲಾವಿದ ಆರ್‌.ಟಿ. ಅರುಣಕುಮಾರ್‌ ತಮ್ಮ ಮಿಮಿಕ್ರಿ ನಗೆಯ ಹರಟೆ, ತಮ್ಮದೇ ಜೀವನದ ಹಲವು ಘಟನೆಗಳನ್ನು ಹೇಳುತ್ತಾ, ತಾವು ಕ್ಯಾನ್ಸರ್‌ನಿಂದ ಗೆದ್ದು ಬಂದ ಬಗೆ ಹಾಗೂ ಸಾಧನೆಗಾಗಿ ಗುರುಗಳು ಹೇಗೆ ಸಹಾಯಕರಾಗುತ್ತಾರೆಂದು ಮಾರ್ಮಿಕವಾಗಿ ಬೋಧಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುರುಘೇಂದ್ರ ಚಿಗಟೇರಿ ಅವರು ಶಿಕ್ಷಕ ವರ್ಗದವರಿಗೆ ಶುಭ ಕೋರಿದರು.  ಸಂಸ್ಥೆಯ ಗೌರವಾಧ್ಯಕ್ಷ ವೀರಣ್ಣ ವಿ. ಚಿಗಟೇರಿ, ಉಪಾಧ್ಯಕ್ಷ ಬಸವರಾಜಪ್ಪ ಬೆಳಗಾವಿ, ಕಾರ್ಯದರ್ಶಿ ಮನೋಹರ ಚಿಗಟೇರಿ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು. 

ಬಿ.ಕೆ. ಹನುಮಂತಪ್ಪ ಸ್ವಾಗತಿಸಿದರು.  ಹೆಚ್‌.ಬಿ. ಜ್ಯೋತಿ ವಂದಿಸಿದರು. ಬಸವರಾಜ್ ನಿರೂಪಿಸಿದರು. 

ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕ ಸಿಬ್ಬಂದಿವಗರ್ದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

error: Content is protected !!