ಹರಿಹರ, ಸೆ. 4- ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಆದೇಶದಂತೆ ನಗರದ ದೊಡ್ಡಿಬೀದಿಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದರೆೆನ್ನಲಾದ ವಾಣಿಜ್ಯ ಮಳಿಗೆಗಳನ್ನು ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡರು.
ಮಂಗಳವಾರ ಬೆಳಿಗ್ಗೆ ದೊಡ್ಡಿಬೀದಿಯ ಗರಡಿಮನೆಯ ಅಕ್ಕ ಪಕ್ಕದಲ್ಲಿ ನಿರ್ಮಿಸಿದ್ದ 11 ಮಳಿಗೆಗಳಿಗೆ ಅಧಿಕಾರಿಗಳ ತಂಡ ಬೀಗ ಹಾಕಿ ಆರೋಗ್ಯ ಇಲಾಖೆ ಸುಪರ್ದಿಗೆ ವಹಿಸಿದರು.
ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದನ್ನು ಪ್ರಶ್ನಿಸಿ ಆರೋಗ್ಯ ಇಲಾಖೆ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಕೆಲವು ವರ್ಷಗಳ ಕಾಲ ವಿಚಾರಣೆ ನಡೆದ ನಂತರ 2021ರಲ್ಲಿ ಪ್ರಕರಣವನ್ನು ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಆರೋಗ್ಯ ಇಲಾಖೆಗೆ ಸೇರಿದ 2.25 ಎಕರೆ ಜಮೀನಿನ ಪೈಕಿ ಎರಡೂವರೆ ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ದಾವೆ ಹೂಡಲಾಗಿತ್ತು. ಈಗ ಆ ಜಾಗವನ್ನು 18-7-2024ರ ನ್ಯಾಯಾಲಯದ ಆದೇಶದ ಪ್ರಕಾರ ಸ್ವಾಧೀನ ಮಾಡಿಕೊಳ್ಳಲಾಯಿತು.
ಮುಂಚೆಯೇ ವಿಷಯ ತಿಳಿದಿದ್ದ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ವ್ಯಾಪಾರಿಗಳು ತಮ್ಮ ವಸ್ತುಗಳನ್ನು ಸಾಗಿಸಿದ್ದರು, ಕೆಲವು ಮಳಿಗೆಗಳಲ್ಲಿದ್ದ ಕೆಲವು ವಸ್ತುಗಳನ್ನು ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಹೊರಕ್ಕೆ ಸಾಗಿಸಿಕೊಂಡರು.
ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಗುರುಬಸವರಾಜ್, ನಗರಸಭೆ ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಎಲ್. ಹನುಮನಾಯ್ಕ್, ನಗರ ಠಾಣೆ ಪಿಎಸ್ಐ ಶ್ರೀಪತಿ ಗಿನ್ನಿ, ಕಂದಾಯ ಅಧಿಕಾರಿ ರಮೇಶ್, ಹಿರಿಯ ಆರೋಗ್ಯಾಧಿಕಾರಿ ಸಂತೋಷ್ ನಾಯ್ಕ್ ಹಾಗೂ ಸಿಬ್ಬಂದಿ ಇದ್ದರು.