ಶಿಕ್ಷಣದಿಂದ ಅಷ್ಟೇ ಅಲ್ಲ, ಕ್ರೀಡೆಯಿಂದಲೂ ಉತ್ತಮ ಭವಿಷ್ಯ

ಶಿಕ್ಷಣದಿಂದ ಅಷ್ಟೇ ಅಲ್ಲ, ಕ್ರೀಡೆಯಿಂದಲೂ ಉತ್ತಮ ಭವಿಷ್ಯ

ಮಲೇಬೆನ್ನೂರು ಕ್ರೀಡಾಕೂಟದಲ್ಲಿ ಬಿಇಓ ದುರುಗಪ್ಪ ಅಭಿಮತ

ಮಲೇಬೆನ್ನೂರು, ಸೆ.2- ಶಿಕ್ಷಣದಿಂದ ಅಷ್ಟೇ ಅಲ್ಲ, ಕ್ರೀಡೆ ಕೂಡಾ ಮನುಷ್ಯನಿಗೆ ಉತ್ತಮ ಭವಿಷ್ಯ ರೂಪಿಸುತ್ತದೆ ಎಂದು ಹರಿಹರ ಬಿಇಓ ದುರುಗಪ್ಪ ಹೇಳಿದರು.

ಪಟ್ಟಣದ ನೀರಾವರಿ ಇಲಾಖೆಯ ಮೈದಾನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗ ಮತ್ತು ಬೀರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದೈಹಿಕ ಶಿಕ್ಷಕರಿಗೆ ಹರಿಹರ ತಾ. ಅನುದಾನಿತ ಶಾಲಾ ಶಿಕ್ಷಕದ ಒಕ್ಕೂಟದ ವತಿಯಿಂದ ನೀಡಲಾದ ಟೀ ಶರ್ಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಕೇಂದ್ರ, ರಾಜ್ಯ ಸರ್ಕಾರಗಳು ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡುತ್ತಿವೆ. ಆದ್ದರಿಂದ ದೈಹಿಕ ಶಿಕ್ಷಕರು ಹೆಚ್ಚು ಹೆಚ್ಚು ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕೆಂದು ಅವರು ತಿಳಿಸಿದರು.

ಕ್ರೀಡೆಗೆ ಅಂತರರಾಷ್ಟ್ರೀಯ ಮಾನ್ಯತೆ ಇರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗೂ ಒತ್ತು ನೀಡಬೇಕು. ಕ್ರೀಡೆ ವಿದ್ಯಾರ್ಥಿ ಜೀವನದಲ್ಲಿ ಬಹಳ ಮಹತ್ತರವಾದ ಘಟ್ಟ ಎಂದ ದುರುಗಪ್ಪ ಅವರು, ಮಕ್ಕಳು ದೈಹಿಕವಾಗಿ ಸದೃಢವಾಗಿ ದ್ದರೆ, ಎಲ್ಲಾ ಕ್ರಿಯೆಗಳಲ್ಲಿ ಸಫಲರಾಗಲು ಸಾಧ್ಯ ಎಂದರು.

ಕ್ರೀಡಾಕೂಟಗಳಲ್ಲಿ ದೈಹಿಕ ಶಿಕ್ಷಕರು ನ್ಯಾಯಯುತವಾದ ತೀರ್ಪು ನೀಡಬೇಕು. ಮಕ್ಕಳಿಗೆ ಅನ್ಯಾಯ ಮಾಡಬೇಡಿ ಎಂದು ಬಿಇಓ ದುರುಗಪ್ಪ ಕಿವಿಮಾತು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್, ಹರಿಹರ ತಾ. ಅನುದಾನಿತ ಶಾಲೆಗಳ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಕೆ.ಭೀಮಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಚಾರ್ಯ ಜಗದೀಶ್ ಉಜ್ಜಯ್ಯನವರ್, ಬೀರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಡಿ.ಕೆ.ಕರಿಬಸಪ್ಪ, ಎಸ್‌ಬಿಕೆಎಂ ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ, ಲಯನ್ಸ್ ಶಾಲೆ ಮುಖ್ಯ ಶಿಕ್ಷಕ ಕೆ.ಚಂದ್ರಶೇಖರ್, ಸರ್ಕಾರಿ ಉರ್ದು ಶಾಲೆ ಶಿಕ್ಷಕ ರೇವಣಸಿದ್ದಪ್ಪ ಅಂಗಡಿ, ಉರ್ದು ಶಾಲೆಯ ಮುಖ್ಯ ಶಿಕ್ಷಕ ಮಹಮದ್ ಖಲೀಲ್, ಆಶ್ರಯ ಶಾಲೆ ಮುಖ್ಯ ಶಿಕ್ಷಕ ಶಶಿಕುಮಾರ್, ಪಿಡಬ್ಲ್ಯೂಡಿ ಶಾಲೆ ಮುಖ್ಯ ಶಿಕ್ಷಕ ಕುಮಾರ್, ತಾ. ಸರ್ಕಾರಿ ನೌಕರರ ಸಂಘದ ನಿರ್ದೇಶಕ ಬಿ.ಹೆಚ್.ಶಿವಕುಮಾರ್, ಶಿಕ್ಷಕರ ಸಂಘದ ವೀರಣ್ಣ, ಬಡ್ತಿ ಮುಖ್ಯ ಶಿಕ್ಷಕ ವೆಂಟೇಶ್, ದೈಹಿಕ ಶಿಕ್ಷಕರಾದ ಬಿ.ಹಾಲಪ್ಪ, ಎ.ಸಿ.ಹನುಮಗೌಡ, ಶ್ರೀನಿವಾಸ್ ರೆಡ್ಡಿ, ಶಿವಕುಮಾರ್ ಹಿರೇಮಠ, ಧನಿಕ್, ಎಂ.ಹೆಚ್.ಅರುಣ್‌ಕುಮಾರ್, ಪತ್ರಕರ್ತರಾದ ಕೆ.ಎನ್.ಹಳ್ಳಿ ನಾಗೇಂದ್ರಪ್ಪ, ಜಿಗಳಿ ಪ್ರಕಾಶ್, ಸದಾನಂದ್ ಹೆಚ್.ಎಂ ಮತ್ತು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಬಿ.ಬಸವರಾಜ್, ಯುವ ಮುಖಂಡ ಕುಂಬಳೂರು ವಾಸು ಸೇರಿದಂತೆ ಇನ್ನೂ ಅನೇಕರು ಈ ವೇಳೆ ಭಾಗವಹಿಸಿದ್ದರು.

error: Content is protected !!