ಕುರುಬರ ಸಂಘಕ್ಕೆ ಸರ್ಕಾರಿ ಜಮೀನು ಮಂಜೂರು ಖಂಡಿಸಿ ಪ್ರತಿಭಟನೆ

ಕುರುಬರ ಸಂಘಕ್ಕೆ ಸರ್ಕಾರಿ ಜಮೀನು ಮಂಜೂರು ಖಂಡಿಸಿ ಪ್ರತಿಭಟನೆ

ದಾವಣಗೆರೆ, ಸೆ. 2- ಜಾತಿ ಸಂಘಟನೆ ಮತ್ತು ಖಾಸಗಿ ಕಂಪನಿಗಳಿಗೆ ಭೂಮಿ ಮಂಜೂರು ಮಾಡಿರುವ ಸಚಿವ ಸಂಪುಟದ ನಿರ್ಧಾರವನ್ನು ಕೈ ಬಿಡುವಂತೆ ಆಗ್ರಹಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಇದೇ ವೇಳೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಮಾತನಾಡಿ, ಕಲಬುರಗಿ ಸರ್ಕಾರಿ ಮಹಾವಿದ್ಯಾಲಯಕ್ಕೆ ಸೇರಿದ 3.07ಎಕರೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಮಂಜೂರು ಮಾಡಿರುವುದನ್ನು ಎಐವೈಎಫ್ ತೀವ್ರವಾಗಿ ಖಂಡಿಸುತ್ತದೆ ಎಂದರು.

ಶೈಕ್ಷಣಿಕ ಚಟುವಟಿಕೆಗಳ ಅನುಕೂಲಕ್ಕೆ ಬಳಕೆಯಾಗಬೇಕಿದ್ದ ಭೂಮಿಯನ್ನು ಜಾತಿ ಸಂಘಟನೆಗೆ ಮಂಜೂರು ಮಾಡಿದ ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ. ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ನಡೆಸುವ ಸ್ಥಳದಲ್ಲಿ ಜಾತಿ ಸಂಘಟನೆಗೆ ಅವಕಾಶ ಮಾಡಿಕೊಟ್ಟಿರುವುದು ಅತ್ಯಂತ ಖಂಡನೀಯ ಎಂದರು.

ರಾಜ್ಯ ಸರ್ಕಾರ ಸರ್ಕಾರಿ ಜಾಗವನ್ನು ಜಾತಿ ಸಂಘಕ್ಕೆ ಮಂಜೂರು ಮಾಡಿರುವ ನಿರ್ಣಯವನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಕುರೇಕುಪ್ಪ ಪ್ರದೇಶದಲ್ಲಿ ನಿರ್ಮಿಸಲಾದ ಜಿಂದಾಲ್ ಸ್ಟೀಲ್ಸ್ ಕಂಪನಿಗೆ ಸುಮಾರ ನಲವತ್ತು ಸಾವಿರ ಕೋಟಿ ರೂ. ಮೌಲ್ಯದ ಎಕರೆ ಜಮೀನನ್ನು ರಾಜ್ಯ ಬೊಕ್ಕಸಕ್ಕೆ ನಷ್ಟಮಾಡಿಕೊಂಡು ಶುದ್ಧ ಕ್ರಯ ಮಾಡಿಕೊಡಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಆವರಗೆರೆ ವಾಸು, ಅಪ್ಪುರಾಜ್, ಕೆರೆನಹಳ್ಳಿ ರಾಜು, ನಿಟುವಳ್ಳಿ ಪರಶುರಾಮ್, ರಘು, ಮಲ್ಲಿಕಾರ್ಜುನ್, ಮಂಜುನಾಥ್ ಮತ್ತಿತರರಿದ್ದರು.

error: Content is protected !!