ದಾವಣಗೆರೆ, ಸೆ.1- ನಡಿಗೆ, ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹದು. ಈ ನಿಟ್ಟಿನಲ್ಲಿ ಪಾದಯಾತ್ರೆಯೂ ಕೂಡ ಯೋಗದ ಒಂದು ಭಾಗವಾಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಚೌಕಿ ಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದದಿಂದ ಮಾಗಾನಹಳ್ಳಿ ಸಮೀಪದ ಕೋಡಿ ಕ್ಯಾಂಪಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭಾನುವಾರ ಮುಂಜಾನೆ ಆಯೋಜಿಸಿದ್ದ ಪಾದಯಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ಪಾದ ಎಂದರೆ ಜ್ಞಾನ-ಕ್ರಿಯೆಗಳ ಸಂಗಮ. ಈ ಜ್ಞಾನ, ಕ್ರಿಯೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ಯಾತ್ರೆಯನ್ನು ಯಶಸ್ವಿಗೊಳಿಸುವುದೇ ನಿಜವಾದ ಪಾದಯಾತ್ರೆ ಎಂದು ಹೇಳಿದರು.
ಜ್ಞಾನದ ಜತೆಗೆ ಕ್ರಿಯೆಯು ಇದ್ದರೆ ಜೀವನ ಪರಿಪೂರ್ಣವಾಗುತ್ತದೆ. ಪಾದಯಾತ್ರೆ ಮಾಡುವ ಮೂಲಕ ಅಂತರಂಗದ ಯಾತ್ರೆ ಮಾಡಬೇಕಿದೆ ಮತ್ತು ಅಂತರಂಗವನ್ನು ಶುದ್ಧಿ ಮಾಡುವುದೇ ನಿಜವಾದ ಪಾದಯಾತ್ರೆ ಎಂದು ತಿಳಿಸಿದರು.
ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಸಮೀಪದ ಮಾಗಾನಹಳ್ಳಿ ಬಳಿಯ ಕೋಡಿ ಕ್ಯಾಂಪಿನ ಕೊಟ್ಟೂರು ಬಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಹೋಗಬೇಕು ಎಂಬ ಸಂಕಲ್ಪ ಪ್ರತಿ ವರ್ಷವೂ ನಡೆಯಲಿ ಎಂದು ಆಶಿಸಿದರು.
ಇದೇ ವೇಳೆ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚನ್ನಬಸವ ಶೀಲವಂತ್ರನ್ನು ಸನ್ಮಾನಿಸಿದರು.
ಯೋಗ ಒಕ್ಕೂಟದ ಜಿಲ್ಲಾಧ್ಯಕ್ಷ ವಾಸುದೇವ ರಾಯ್ಕರ್, ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟಿನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ, ಕಣಕುಪ್ಪಿ ಕರಿಬಸಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ, ಉತ್ತಂಗಿ ಪ್ರಕಾಶ, ತೀರ್ಥರಾಜ ಹೋಲೂರು, ರಾಜು ಎಲ್. ಬದ್ದಿ, ಪರಶುರಾಮ, ನಾಗರಾಜ, ಮಾದೇಗೌಡರು, ಬಾದಾಮಿ ಜಯಣ್ಣ, ನಿರಂಜನ ಅಣಬೂರು ಮಠ, ಚಂದ್ರು ಸೇರಿದಂತೆ ಯೋಗ ಒಕ್ಕೂಟದ ಸದಸ್ಯರು, ಕೊಟ್ಟೂರೇಶ್ವರ ಸ್ವಾಮಿ ಭಕ್ತರು ಇದ್ದರು.
ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್, ಸರ್ವ ಯೋಗ ಕೇಂದ್ರಗಳು, ಲಯನ್ಸ್ ಕ್ಲಬ್ ಹಾಗೂ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.