ಹರಿಹರ, ಸೆ.1- ಶ್ರಾವಣ ಮಾಸದ ನಿಮ್ಮಿತ್ಯ ಪ್ರತಿವರ್ಷ ತುಂಗಭದ್ರಾ ನದಿಗೆ ಪೂಜೆಗೆ ಬರುವಂತ ದೇವರಿಗೆ, ಪೂಜೆ ಮಾಡಿಕೊಂಡು ಹೋಗುವುದಕ್ಕೆ ತುಂಗಾರತಿ ಸ್ಥಳದಲ್ಲಿ ಅವಕಾಶ ನೀಡದೇ ಇರುವುದರಿಂದ ವಿವಿಧ ಗ್ರಾಮಗಳಿಂದ ದೇವರನ್ನು ಕರೆತಂದ ಭಕ್ತರು ತುಂಗಾರತಿ ಸ್ಥಳದಲ್ಲಿ ದೇವರನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಈ ವೇಳೆ ಎಮ್ಮನಬೇತೂರು ಗ್ರಾಮದ ರೇವಣಸಿದ್ದಪ್ಪ ಮಾತನಾಡಿ, ಶ್ರಾವಣ ಮಾಸದಲ್ಲಿ ಪ್ರತಿ ವರ್ಷವೂ ನಮ್ಮ ಗ್ರಾಮದ ವತಿಯಿಂದ, ಗ್ರಾಮದ ಎಲ್ಲಾ ದೇವರನ್ನು ತುಂಗಭದ್ರಾ ನದಿಯ ತಟದಲ್ಲಿ ಇಟ್ಟು, ಪೂಜೆ ಮಾಡಿಕೊಂಡು ಹೋಗವಂತಹ ಪದ್ದತಿಯು ಹಲವಾರು ವರ್ಷಗಳಿಂದ ನಡೆದುಕೊಂಡು ಬರಲಾಗುತ್ತಿದೆ. ಅದರ ಅನ್ವಯದಂತೆ ಈ ವರ್ಷವೂ ಸಹ ಗ್ರಾಮದ 8 ದೇವಸ್ಥಾನದ ದೇವರನ್ನು ತುಂಗಭದ್ರಾ ನದಿಯ ಸ್ಥಳಕ್ಕೆ ತಂದಿದ್ದು, ಆದರೆ ಇಲ್ಲಿನ ಸ್ಥಳದಲ್ಲಿ ತುಂಗಾರತಿ ಕಾಮಗಾರಿ ನಡೆಯುತ್ತಿರುವುದರಿಂದ, ನದಿಯ ಹತ್ತಿರಕ್ಕೆ ಯಾರನ್ನೂ ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಟೂರಿಸ್ಟ್ ಪೊಲೀಸ್ ಸಿಬ್ಬಂದಿ ವಿಜಯಲಕ್ಷ್ಮಿ ಮಾತನಾಡಿ, ನಮಗೆ ನಮ್ಮ ಹಿರಿಯ ಅಧಿಕಾರಿಗಳು ಏನು ಆದೇಶ ನೀಡಿರುತ್ತಾರೆ, ಅದನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ ಮಾತನಾಡಿ, ತುಂಗಾರತಿ ಸ್ಥಳದಲ್ಲಿ ಗುಟ್ಕಾ, ಎಲೆ ಅಡಿಕೆ ತಿಂದು ಉಗುಳುವುದು, ಎಲ್ಲೆಂದರಲ್ಲಿ ಕಸವನ್ನು ಹಾಕುವುದು, ಈ ತರಹ ಯಾವುದೇ ರೀತಿಯ ಗಲೀಜು ಮಾಡದಂತೆ ತಿಳಿಸಿದ ನಂತರ ಎಮ್ಮನಬೇತೂರು ಗ್ರಾಮದ ದೇವರುಗಳಿಗೆ ನದಿ ದಂಡೆಯ ಮೇಲೆ ಪೂಜೆ ಮಾಡಿಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಮಠದ ಅರ್ಚಕ ಪವನ್ ಕುಮಾರ್, ಪೊಲೀಸ್ ಸಿಬ್ಬಂದಿ ರವಿಕುಮಾರ್, ಎಮ್ಮನಬೇತೂರು ಗ್ರಾಮದ ಕರಿಬಸಪ್ಪ, ಅಜ್ಜಯ್ಯ, ರೇವಣ ಸಿದ್ದಪ್ಪ, ಕಲ್ಲೇಶ್, ಗಗನ್, ಸಿದ್ದೇಶ್, ಮಲ್ಲಿಕಾರ್ಜುನ್ ಇತರರು ಹಾಜರಿದ್ದರು.