ಹರಪನಹಳ್ಳಿ, ಸೆ.1- ಸೆಪ್ಟೆಂಬರ್ 2ಕ್ಕೆ ನಿಗದಿಯಾಗಿದ್ದ ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಧಾರವಾಡ ಉಚ್ಚ ನ್ಯಾಯಾಲಯ ಮತ್ತೆ ತಡೆಯಾಜ್ಞೆ ನೀಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಜನಾಂಗದವರಿಗೆ ಅಧ್ಯಕ್ಷ ಸ್ಥಾನದ ಮೀಸ ಲಾತಿ ಬದಲಾಯಿಸುವಂತೆ ನ್ಯಾಯಾಲಯ ಮೊರೆಹೋದ ಕಾರಣ ಸೆ.2ಕ್ಕೆ ನಡೆಯಬೇಕಿದ್ದ ಚುನಾವಣೆ, 2ನೇ ಬಾರಿಗೆ ತಾತ್ಕಾಲಿಕ ಮೂಂದೂಡಿಕೆಯಾಗಿದೆ. ಬರುವ ಸೆ.11ಕ್ಕೆ ವಿಚಾರಣೆ ದಿನಾಂಕ ನಿಗದಿ ಪಡಿಸಿದೆ.
ಈ ಮೊದಲು ಆ.21ರಂದು ಚುನಾವಣೆ ನಿಗದಿಯಾಗಿತ್ತು, ಪುರಸಭಾ ಸದಸ್ಯ ಟಿ. ವೆಂಕಟೇಶ್ ಎಂಬುವವರು ಮೀಸಲಾತಿ ವಿಚಾರವಾಗಿ ಧಾರವಾಡ ಉಚ್ಚ ನ್ಯಾಯಾಲಯ ಪೀಠದಿಂದ ತಡೆಯಾಜ್ಞೆ ಹೊರಡಿಸಿದ್ದರು. ಇದೀಗ ಬಿಜೆಪಿಯವರು ಮತ್ತೆ ನ್ಯಾಯಾಲಯದ ಮೊರೆ ಹೋದ ಕಾರಣ ಚುನಾವಣೆಗೆ 2ನೇ ಬಾರಿಗೆ ತಡೆಯಾಜ್ಞೆಯ ತೊಡಕು ಸುತ್ತಿಕೊಂಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತವಿದ್ದರೂ ಪುರಸಭೆ ಗದ್ದುಗೆ ಏರಲು ಅದೃಷ್ಟ ಕೂಡಿ ಬಂದಿಲ್ಲ ಎಂಬ ಮಾತುಗಳು ಜನಸಾಮಾನ್ಯರ ಬಾಯಿಂದ ಬರುತ್ತಿವೆ.