ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಜಯದೇವ ಜಗದ್ಗುರುಗಳ ಮೂರ್ತಿಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ
ದಾವಣಗೆರೆ, ಆ. 29- ದೇಶದಾದ್ಯಂತ ಇರುವ ಜಯದೇವ ಪ್ರಸಾದ ನಿಲಯಗಳಲ್ಲಿ ಓದಿದಂತಹವರು ಇಂದು ದೇಶ – ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಶಿವಯೋಗಾಶ್ರಮದ ಆವರಣದಲ್ಲಿ ಶಿವಯೋಗಾಶ್ರಮ ಟ್ರಸ್ಟ್, ಬಸವ ಕೇಂದ್ರ ವಿರಕ್ತಮಠದ ಸಹಯೋಗದಲ್ಲಿ ನಿನ್ನೆ ನಡೆದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಜಯದೇವ ಜಗದ್ಗುರುಗಳ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಾರ್ಯ ಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಯದೇವ ಜಗದ್ಗುರುಗಳ ಜಯಂತ್ಯೋ ತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಹಮ್ಮಿಕೊಳ್ಳಲಾಗುವುದು ಎಂದರು.
ಜಯದೇವ ಜಗದ್ಗುರುಗಳು 1906 ರಲ್ಲಿ ಜಯದೇವ ಉಚಿತ ಪ್ರಸಾದ ನಿಲಯ ವನ್ನು ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಆರಂಭಿಸಿದ್ದರು. ನಂತರದಲ್ಲಿ ಬೆಂಗಳೂರು, ತುಮಕೂರು, ತಿಪಟೂರು, ಅರಸಿಕೆರೆ, ಕೊಲ್ಲಾಪುರ, ಧಾರವಾಡ, ನಿಪ್ಪಾಣಿ ಸೇರಿದಂತೆ ವಿವಿಧೆಡೆ ಪ್ರಸಾದ ನಿಲಯಗಳನ್ನು ಆರಂಭಿಸಿದರು. ಅಂದಿನಿಂದ ಇಂದಿನವ ರೆಗೂ ಅವು ನಡೆದುಕೊಂಡು ಬರುತ್ತಿವೆ. ಅಂತಹ ಪರಮಪೂಜ್ಯರು ಶಿಕ್ಷಣ ಕ್ರಾಂತಿಯನ್ನು ಮಾಡದೇ ಇದ್ದಿದ್ದರೆ ಇವತ್ತು ದೇಶ, ರಾಜ್ಯ ಉದ್ಧಾರವಾಗಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ರಾಷ್ಟ್ರಪತಿ ಬಿ.ಡಿ.ಜತ್ತಿ ಸೇರಿದಂತೆ ಅನೇಕ ಸಾಹಿತಿಗಳು ಶ್ರೀಗಳು ಸ್ಥಾಪಿಸಿದ ಪ್ರಸಾದ ನಿಲಯಗಳಲ್ಲಿ ಓದಿದ್ದಾರೆ. 1940 ರಲ್ಲಿನ 45 ಲಕ್ಷ ರು.ಗಳ ಬಜೆಟ್ನಲ್ಲಿ ಜಯದೇವ ಜಗದ್ಗುರುಗಳು 18 ಲಕ್ಷ ರು.ಗಳನ್ನು ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗ ಮಾಡಿದ್ದಾರೆ.
ಜಯದೇವ ಜಗದ್ಗುರುಗಳು ಎಲ್ಲೆಲ್ಲಿ ಜಯದೇವ ಪ್ರಸಾದ ನಿಲಯ ಆರಂಭಿಸಿ ದ್ದಾರೆಯೋ ಅಲ್ಲಿ, ಮತ್ತು ಮುರುಘಾ ಮಠದ ಶಾಲಾ – ಕಾಲೇಜು ಗಳಲ್ಲಿ ಇಂದು ಶ್ರೀಗಳ ಭಕ್ತರು ಅರ್ಥಪೂರ್ಣವಾಗಿ ಈ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತಿದ್ದಾರೆ. ಜಯದೇವ ಜಗದ್ಗುರುಗಳ ರಾಜಧಾನಿ ಎಂದರೆ ಅದು ದಾವಣಗೆರೆಯಾಗಿದೆ. ಎಲ್ಲರಿಗೂ ಶಿಕ್ಷಣ ದೊರಕುವಂತಾಗಲಿ, ಮಕ್ಕಳಿಗೆ ತೊಂದರೆಯಾಗು ವುದು ಬೇಡ ಎಂದು ನಾಡಿನಾದ್ಯಂತ ಜಯದೇವ ಶ್ರೀಗಳು ಉಚಿತ ಪ್ರಸಾದ ನಿಲಯಗಳನ್ನು ಅಂದೇ ಸ್ಥಾಪಿಸಿದರು. ಹೈಮಾಸ್ಟ್ ಲೈಟಿನಂತೆ ಜಯದೇವ ಜಗದ್ಗುರುಗಳು ಇಡೀ ಮಾನವ ಕುಲಕ್ಕೇ ಬೆಳಕಾಗಿದ್ದು ಎಲ್ಲರ ಬದುಕನ್ನು ಬೆಳಗಿಸುತ್ತಿದ್ದಾರೆ. ಜಯದೇವ ಜಗದ್ಗುರುಗಳ ಸಮಾಜಮುಖಿ ಕಾರ್ಯಗಳಿಂದ ಬರೀ ದೇಶ ಅಲ್ಲ ರಾಜ್ಯ ಉದ್ಧಾರವಾಗಿದೆ. ಎಲ್ಲರಿಗೂ ಶಿಕ್ಷಣ ಅನ್ನುವುದು ಸಿಕ್ಕಿದೆ. ಎಲ್ಲರೂ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯನ್ನು ಎಲ್ಲರೂ ಸ್ಮರಣೆ ಮಾಡೋಣ, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು – ನೀವುಗಳು ಸಾಗೋಣ ಎಂದರು.
ಮಹಾತ್ಮಾ ಗಾಂಧೀಜಿ ಒಮ್ಮೆ ಜಯದೇವ ಜಗದ್ಗುರುಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಸ್ಪೃಶ್ಯತೆ ನಿವಾರಣೆ ಬಗ್ಗೆ 12ನೇ ಶತಮಾನದಲ್ಲಿ ಬಸವಣ್ಣನವರು ಹೋರಾಟ ಮಾಡಿದ್ದರು. ಅಂತಹ ಕೆಲಸವನ್ನು ನೀವು ಮಾಡುತ್ತಿದ್ದೀರಿ ಎಂದು ಜಯದೇವ ಜಗದ್ಗುರುಗಳು ಗಾಂಧೀಜಿಯವರಿಗೆ ತಿಳಿಸಿದ್ದರಂತೆ. ನಂತರದಲ್ಲಿ ಅಸಹಕಾರ ಚಳುವಳಿ ಮುಖಾಂತರ ಗಾಂಧೀಜಿ ಕರೆ ನೀಡಿದಂತೆ ಅಂದಿನಿದಲೇ ಜಯದೇವ ಜಗದ್ಗುರುಗಳು ಕೂಡಾ ತಾವು ರೇಷ್ಮೆ ಬಟ್ಟೆ ತೊಡುವುದು ಬಿಟ್ಟು ಖಾದಿ ಬಟ್ಟೆಗೆ ಕಾವಿ ಬಣ್ಣ ಹಾಕಿಕೊಂಡು ತೊಡಲು ಆರಂಭಿಸಿದರು ಎಂದು ಹೇಳಿದರು.
ಚಿತ್ರದುರ್ಗ ಬೃಹನ್ಮಠದ ಉತ್ತರಾಧಿಕಾರಿ ಬಸವಾದಿತ್ಯ ದೇವರು, ಹಾಸಬಾವಿ ಕರಿ ಬಸಪ್ಪ, ಎಂ.ಜಯಕುಮಾರ್, ಅಂದನೂರು ಮುಪ್ಪಣ್ಣ, ಎಸ್.ಓಂಕಾರಪ್ಪ, ಕಣಕುಪ್ಪಿ ಮುರುಗೇಶಪ್ಪ, ಎಂ.ಕೆ.ಬಕ್ಕಪ್ಪ, ಮುರುಘ ರಾಜೇಂದ್ರ ಚಿಗಟೇರಿ, ಲಂಬಿ ಮುರುಗೇಶ, ಟಿ.ಎಂ. ವೀರೇಂದ್ರ, ಬೆಳ್ಳೂಡಿ ಮಂಜುನಾಥ, ಸಂಗಣ್ಣ, ಚಿಗಟೇರಿ ಜಯದೇವ, ಕೀರ್ತಿ, ಶರಣಪ್ಪ, ಚನ್ನಬಸವ ಶೀಲವಂತ್, ರೋಷನ್, ಶಿವಬಸಮ್ಮ, ಲತಾ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.