ಸ್ವನಿಧಿಯಲ್ಲಿ ಪಾಲಿಕೆ ಸಾಧನೆಗೆ ಪ್ರಶಸ್ತಿ

ಸ್ವನಿಧಿಯಲ್ಲಿ ಪಾಲಿಕೆ ಸಾಧನೆಗೆ ಪ್ರಶಸ್ತಿ

ದಾವಣಗೆರೆ, ಆ. 29 – ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿರುವ ಪಿಎಂ ಸ್ವ-ನಿಧಿ ಯೋಜನೆ ಜಾರಿಗಾಗಿ ದಾವಣಗೆರೆ ಪಾಲಿಕೆ ಹಾಗೂ ಹರಿಹರ ನಗರಸಭೆಗಳು ಪ್ರಶಸ್ತಿ ಪಡೆದುಕೊಂಡಿವೆ.

ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಸರ್ಕಾರದ ಯೋಜನೆಯಾದ ಪಿಎಂ – ಸ್ವನಿಧಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯು ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಹರಿಹರ ನಗರಸಭೆಯು ಹತ್ತನೇ ಸ್ಥಾನದಲ್ಲಿದೆ.

ಈ ಯೋಜನೆಯ ಮೂಲಕ ಜಿಲ್ಲೆಯ ಒಟ್ಟಾರೆ 16 ಸಾವಿರ ಬೀದಿ ವ್ಯಾಪಾರಸ್ಥರಿಗೆ ಸಾಲ ನೀಡಲಾಗಿದೆ. ದಾವಣಗೆರೆ ನಗರ ಪಾಲಿಕೆಯು ಗುರಿ ಮೀರಿ ಶೇ.117ರ ಸಾಧನೆ ಮಾಡಿದೆ.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್, ಅಭಿಯಾನದ ನಿರ್ದೇಶಕಿ ಪಿ. ವಿದ್ಯಾ, ದಾವಣಗೆರೆ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಏಕನಾಥ್ ಹಾಗೂ ಜಿಲ್ಲೆಯ ಅಭಿಯಾನ ವ್ಯವಸ್ಥಾಪಕ ಡಾ. ಬಸವರಾಜ್ ಉಪಸ್ಥಿತರಿದ್ದರು.

error: Content is protected !!