ರೈತ ಸಂಘದಿಂದ ಜಲಸಂಪನ್ಮೂಲ ಕಚೇರಿ ಮುತ್ತಿಗೆ
ದಾವಣಗೆರೆ, ಆ. 29 – ಪೈಪ್‍ಲೈನ್ ಅಳವಡಿಕೆಗೆ ಅಡ್ಡಿಪಡಿಸಿ, ರೈತ ಮುಖಂಡನ ಆರೋಗ್ಯ ಹದಗೆಡುವಂತೆ ಮಾಡಿದ್ದಾರೆಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಗುರುವಾರ ದಿಢೀರ್ ಜಲಸಂಪನ್ಮೂಲ ಇಲಾಖೆ ಕಚೇರಿ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.
ನಗರದ ಹದಡಿ ರಸ್ತೆಯಲ್ಲಿರುವ ಕಚೇರಿಗೆ ಮುತ್ತಿಗೆ ಹಾಕಿದ ಸಂಘದ ಪದಾಧಿಕಾರಿಗಳು, ಮುಖಂಡರು ಇಲಾಖೆಯ ಇಇ ಮಂಜುನಾಥ, ಎಇಇ ವಿಜಯ್ ಅವರ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ನಲ್ಕುದುರೆ ಚನ್ನಬಸಪ್ಪ ಅವರ ಹೊಲದ ಪಕ್ಕದಲ್ಲಿಯೇ ರಸ್ತೆ ಹೋಗಿದೆ. ಈ ಹಿಂದೆ ಹಳೆ ರಸ್ತೆ ಇದ್ದ ಜಾಗದಲ್ಲಿ ಇದೀಗ ಹೊಸ ರಸ್ತೆ ನಿರ್ಮಾಣ ಮಾಡಿದ್ದಾರೆ. ರಸ್ತೆ ಅಗೆದು ಪೈಪ್‍ಲೈನ್ ಹಾಕಿ ಚನ್ನಬಸಪ್ಪನವರ ಜಮೀನಿಗೆ ನೀರು ಹರಿಸಬೇಕಿತ್ತು. ಇದಕ್ಕೆ ಅಡ್ಡಿಪಡಿಸಿದ ಇಲಾಖೆಯ ಅಧಿಕಾರಿಗಳು ಪದೇ ಪದೇ ಚನ್ನಬಸಪ್ಪ ಅವರಿಗೆ ಕಿರುಕುಳ ನೀಡುತ್ತಾ ಬಂದಿದ್ದಾರೆ.
ನೀರಿಲ್ಲದೆ ಬೆಳೆ ಬೆಳೆಯಲು ಆಗದು. ಅಲ್ಲಿಗೆ ನಮ್ಮ ಭೂಮಿ ಬೀಳು ಬೀಳಲಿವೆ ಎಂಬ ಆತಂಕದಿಂದ ಚನ್ನಬಸಪ್ಪ ಅವರ ಆರೋಗ್ಯ ಹದಗೆಟ್ಟಿತು. ರಕ್ತದೊತ್ತಡ ತೀರಾ ಕೆಳಮಟ್ಟಕ್ಕೆ ಇಳಿದು, ಸಾವು – ಬದುಕಿನ ಮಧ್ಯೆ ಹೋರಾಟ ಮಾಡುವಂತಾಯಿತು. ಇದಕ್ಕೆ ಅಧಿಕಾರಿಗಳು ಹೊಣೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಶತಕೋಟಿ ಬಸಪ್ಪ ಮಾತನಾಡಿ, ರೈತರಿಗೆ ಕಿರುಕುಳ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಚನ್ನಬಸಪ್ಪ ಅವರ ವಿಷಯ ತಿಳಿದು ನಮ್ಮ ಸಂಘದ ಪದಾಧಿಕಾರಿಗಳು ಧೈರ್ಯ ತುಂಬಿದ್ದರಿಂದ ಇಂದು ಅವರು ಆರೋಗ್ಯವಾಗಿ ಇದ್ದಾರೆ. ಇಲ್ಲದೇ ಹೋದರೆ ಅವರ ಜೀವಕ್ಕೆ ಅಪಾಯ ಇತ್ತು. ಇನ್ನಾದರೂ ಅಧಿಕಾರಿಗಳು ಇಂತಹ ಕಾರ್ಯ ಕೈಬಿಡಬೇಕು ಎಂದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚಿನ್ನಸಮುದ್ರ ಶೇಖರ್‍ನಾಯ್ಕ ಮಾತನಾಡಿ, ತಕ್ಷಣ ಅಧಿಕಾರಿಗಳು ಪೈಪ್‍ಲೈನ್ ಹಾಕಲು ಅಗತ್ಯ ಅನುಮತಿ ನೀಡಬೇಕು ಎಂದರು. ಸತತ ಒಂದು ತಾಸಿನ ಪ್ರತಿಭಟನೆ ಬಳಿಕ ಅಧಿಕಾರಿಗಳು ರೈತ ಸಂಘದ ಬೇಡಿಕೆಗೆ ಸಮ್ಮತಿ ಸೂಚಿಸಿದರು. ಇದರೊಂದಿಗೆ ರೈತ ನಾಯಕರು ಪ್ರತಿಭಟನೆ ಹಿಂಪಡೆದರು.
ಸಂಘದ ದಾವಣಗೆರೆ ತಾಲ್ಲುಕು ಅಧ್ಯಕ್ಷ ಮಂಡ್ಲೂರು ವಿಶ್ವನಾಥ್, ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಎಲೋದಹಳ್ಳಿ ಕಾಳೇಶ್, ಮುಖಂಡರಾದ ದಾಗಿನಕಟ್ಟೆ ಬಸಪ್ಪ, ಮಾಸಡಿ ಭರಮಪ್ಪ, ಶ್ರೀನಿವಾಸ್ ನೇತೃತ್ವ ವಹಿಸಿದ್ದರು.