ದಾವಣಗೆರೆ, ಆ.28- ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸಮುದಾಯದ ಮುಖಂಡರು ಮತ್ತು ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪೂರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರವನ್ನು ಓದಿದ ಮಾಜಿ ಸಚಿವ ಎಚ್. ಆಂಜನೇಯ, ಮಾದಿಗ ಸಮುದಾಯಕ್ಕೆ ನ್ಯಾಯವಾಗಿ ದೊರಕಬೇಕಾಗಿದ್ದ ಮೀಸಲಾತಿ ಪ್ರಮಾಣ ನಿರೀಕ್ಷೆ ಮಟ್ಟದಲ್ಲಿ ದೊರೆತಿಲ್ಲ. ನಿರಂತರ ಹೋರಾಟದ ಫಲವಾಗಿ ಒಳ ಮೀಸ ಲಾತಿ ವರ್ಗೀಕರಣಕ್ಕಾಗಿ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ. ಜೊತೆಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಐತಿಹಾಸಿಕ ತೀರ್ಪನ್ನು ನೀಡಿದೆ.
ಈಗಾಗಲೇ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಒಳ ಮೀಸಲಾತಿ ವರ್ಗೀ ಕರಣಕ್ಕೆ ಮುಂದಾಗಿವೆ. ಅದೇ ರೀತಿ ತಾವೂ ಕೂಡ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿ ಸಿದ್ದು, ಶೀಘ್ರ ಜಾರಿಗೊಳಿಸುವ ಮೂಲಕ ಸಮು ದಾಯದ ಸಮಗ್ರ ಪ್ರಗತಿಗೆ ಮುಂದಾಗಬೇಕೆಂದು ಕೋರಿದರು. ಸುಪ್ರೀಂ ತೀರ್ಪು ಬಂದ ತಕ್ಷಣ ತೆಲಂಗಾಣ, ಆಂಧ್ರ, ಪಂಜಾಬ್, ಹರಿಯಾಣ ಮತ್ತಿತರೆ ರಾಜ್ಯಗಳ ಸರ್ಕಾರಗಳೂ ಒಳ ಮೀಸ ಲಾತಿ ಜಾರಿಗೆ ಆಗುವವರೆಗೂ ಖಾಲಿಯಿರುವ ಹುದ್ದೆಗಳಿಗೆ ಕರೆದಿರುವ ಪ್ರಕ್ರಿಯೆಗಳಿಗೆ ತಡೆ ಹಿಡಿದಿದ್ದಾರೆ. ಅದೇ ಮಾರ್ಗವನ್ನು ರಾಜ್ಯದಲ್ಲೂ ಅನುಸರಿಸಬೇಕು ಎಂದು ಕೋರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನೊಂದ, ಅಸ್ಪೃಷ್ಯ ಸಮಾಜದ ನೋವಿನ ಅರಿವು ನನಗಿದೆ. ಒಳಮೀಸಲು ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದಂತೆ ಅದನ್ನು ಸ್ವಾಗತಿಸಿದ್ದೇನೆ. ಅದರರ್ಥ ನಾನು ನೊಂದ ಜನರ ಪರ ಎಂದರ್ಥ ಎನ್ನುವ ಮೂಲಕ ಒಳಮೀಸಲು ಜಾರಿಗೊಳಿಸುವ ಅಭಯ ನೀಡಿದರು.
ಶಾಸಕರಾದ ಮಾಯಕೊಂಡದ ಕೆ.ಎಸ್.ಬಸವಂತಪ್ಪ, ನೆಲಮಂಗಲದ ಶ್ರೀನಿವಾಸ್, ಮಾಜಿ ಸಚಿವ ಎಂ.ಶಿವಣ್ಣ , ವಿಧಾನ ಪರಿಷತ್ತು ಸದಸ್ಯ ಡಾ.ಡಿ. ತಿಮ್ಮಯ್ಯ ಮುಂತಾದವರು ನಿಯೋಗದಲ್ಲಿದ್ದರು.