ದಾವಣಗೆರೆ ಸಂಸದೆ ಡಾ. ಪ್ರಭಾಗೆ ನೋಟಿಸ್

ದಾವಣಗೆರೆ ಸಂಸದೆ  ಡಾ. ಪ್ರಭಾಗೆ ನೋಟಿಸ್

ದಾವಣಗೆರೆ, ಆ.28- ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆಸಿ ಆಯ್ಕೆಯಾಗಿ ದ್ದಾರೆಂದು ಆರೋಪಿಸಿ ಸಲ್ಲಿಸಿರುವ ತಕರಾರು ಅರ್ಜಿ ಸಂಬಂಧ ಹೈಕೋರ್ಟ್, ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ಗೆ ನೋಟಿಸ್ ಜಾರಿಗೊಳಿಸಿದೆ.

ಡಾ. ಪ್ರಭಾ ಮಲ್ಲಿಕಾರ್ಜುನ್ ಆಯ್ಕೆ ಅಸಿಂಧುಗೊಳಿಸಬೇಕೆಂದು ಪರಾಜಿತ ಅಭ್ಯರ್ಥಿ ಜಿ.ಎಸ್. ಗಾಯತ್ರಿ ಸಿದ್ದೇಶ್ವರ್ ಹಾಗೂ ದಾವಣಗೆರೆಯ ಸುಭಾನ್ ಖಾನ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯು ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದ್ದವು. ಕೆಲಕಾಲ ವಾದಲಿಸಿದ ನ್ಯಾಯಪೀಠ, ಪ್ರಭಾ ಮಲ್ಲಿಕಾರ್ಜುನ್ ಸೇರಿ ದಾವಣಗೆರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಸೆ. 19ಕ್ಕೆ ಮುಂದೂಡಿತು.

ಪ್ರಭಾ ಮಲ್ಲಿಕಾರ್ಜುನ್ ಗ್ಯಾರಂಟಿ ಕಾರ್ಡ್ ವಿತರಿಸಿ ಮತದಾರರಿಗೆ ಆಮಿಷವೊಡ್ಡಿರುವುದಲ್ಲದೇ, ಮಹಿಳೆಯರಿಗೆ 1 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು.

ಇದು ಪ್ರಜಾಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿದ್ದು, ಮತದಾರರಿಗೆ ಲಂಚದ ಆಮಿಷ ಒಡ್ಡಿದ್ದಾರೆ ಮತ್ತು ಚುನಾವಣಾ ಅಕ್ರಮಗಳನ್ನು ನಡೆಸಿ ಅವರು ಆಯ್ಕೆಯಾಗಿದ್ದಾರೆ.  ಆದ್ದರಿಂದ ಅವರ ಆಯ್ಕೆ ಅಸಿಂಧುವೆಂದು ಘೋಷಿಸಲು ಅರ್ಜಿದಾರರು ಮನವಿ ಮಾಡಿದ್ದಾರೆ.

error: Content is protected !!