ದಾವಣಗೆರೆ, ಆ.28 – ದಾವಣಗೆರೆ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬುಧವಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಕವಿಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕವಿ, ಕಥೆಗಾರ ಸದಾಶಿವ ಸೊರ ಟೂರ ಅವರು ವಿದ್ಯಾರ್ಥಿಗಳೊಂದಿಗೆ ಕಾವ್ಯ ಸಂವಾದ ನಡೆಸಿ ಕೊಟ್ಟರು. ಕವಿಗೋಷ್ಠಿಯು ವಿದ್ಯಾರ್ಥಿಗಳಲ್ಲಿ ಸೃಜಶೀಲ ಸಾಹಿತ್ಯಿಕ ಮನೋಭಾವನೆಗಳನ್ನು ಬೆಳೆಸಲು ಮತ್ತು ಭಾಷಾ ಪ್ರೌಢಿಮೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುದು. ವಿದ್ಯಾರ್ಥಿಗಳಲ್ಲಿ ಓದುವ, ಬರೆ ಯುವ, ಕ್ರಿಯಾಶೀಲ ಮನಸ್ಥಿತಿಯನ್ನು ಬೆಳೆಸಲು ಪೂರಕವಾಗಿದೆ ಎಂದರು.
ವಿದ್ಯಾರ್ಥಿಗಳ ಕವನಗಳ ಶೈಲಿ, ಬದಲಾವಣೆಯ ಕುರಿತು ಸಲಹೆ ನೀಡಿದರು. ಕಾವ್ಯ, ಕಾವ್ಯಶೈಲಿ, ವಸ್ತು ಆಯ್ಕೆ, ಸ್ವರೂಪ, ವಾಚನದ ಲಯ ಮತ್ತಿತರೆ ಅಂಶಗಳ ಕುರಿತು ಸಲಹೆ ನೀಡಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು, ವಿಭಾಗದ ಅಧ್ಯಕ್ಷ ಡಾ.ವಿ. ಜಯರಾಮಯ್ಯ ವಹಿಸಿದ್ದರು. ಸೃಜನಶೀಲ ಸಾಹಿತ್ಯ ರಚನೆಗೆ ಆದಿ-ಅಂತ್ಯ ಎಂಬುದಿಲ್ಲ. ಕಲಿಕೆ ನಿರಂತರವಾಗಿರುವುದರಿಂದ ವಿದ್ಯಾರ್ಥಿಗಳು ಪ್ರತಿ ದಿನವೂ ಹೊಸತನ್ನು ಕಲಿಯಲು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಕವನ ವಾಚಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಮಹಾಂತೇಶ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.