ಶ್ರೀ ಮಡಿವಾಳ ಮಾಚಿ ದೇವರ ಸ್ಮರಣೋತ್ಸವದಲ್ಲಿ ಮಾಚಿದೇವ ಮಹಾಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ
ದಾವಣಗೆರೆ, ಆ. 26 – ಮಡಿವಾಳ ಸಮುದಾಯವು ಸಂಘಟನೆಯಲ್ಲಿ ಹಿಂದೆ ಉಳಿಯಲು ಹೋರಾಟದ ಮನೋಭಾವ ಕಡಿಮೆ ಇರುವುದೂ ಸಹ ಒಂದು ಕಾರಣ ಎಂದು ಚಿತ್ರದುರ್ಗ ಮಾಚಿದೇವ ಮಹಾಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ತಿಳಿಸಿದರು.
ಸ್ಥಳೀಯ ವಿನೋಬ ನಗರದ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಇಂದು ನಡೆದ ಶ್ರೀ ಮಡಿವಾಳ ಮಾಚಿ ದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಹಸಿವು ಮತ್ತು ಅವಮಾನಕ್ಕೆ ಒಳಗಾದವರು ಹೋರಾಟದಿಂದ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿರುವುದು ಕಾಣಬಹುದು. ಆದರೆ ನಮ್ಮ ಸಮುದಾಯದಲ್ಲಿ ಯಾರೂ ಕೂಡ ಸಮಾಜದ ಬಗ್ಗೆ ಅಭಿಮಾನ ಇಟ್ಟುಕೊಳ್ಳದೆ ಸಂಘಟಿತರಾಗದ ಕಾರಣ ಯಾವುದೇ ಪಕ್ಷಗಳಾಗಲೀ, ಸರ್ಕಾರಗಳಾಗಲೀ ನಮ್ಮನ್ನು ಗುರುತಿಸಲು ಮುಂದಾಗುತ್ತಿಲ್ಲ ಎಂದರು.
ಸಮುದಾಯದ ಮೇಲಿನ ನಿರಾಸಕ್ತಿ, ತಾತ್ಸಾರ ದೂರವಿಟ್ಟು ಸಮಾಜದ ಕೆಲಸ ಮಾಡಬೇಕು. ಸಮಾಜದ ಮುಂದಿನ ಪ್ರಜೆಗಳು ಈ ಹಂತವನ್ನು ಪರಿಪಕ್ವತೆಯಿಂದ ಮುನ್ನಡೆಸಿದಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯ. ಸಮುದಾಯದ ಅಭಿವೃದ್ಧಿಗೆ ದುಡಿಯಬೇಕು. ನಾವೆಲ್ಲರೂ ಸೇರಿ ಸಮುದಾಯದ ಅಭಿವೃದ್ಧಿ ಮಾಡೋಣ ಎಂದು ತಿಳಿಸಿದರು.
ಯಾವ ಮೀಸಲಾತಿ ಬಂದರೂ ನಮ್ಮ ಗುರಿಯ ಸಾಧನೆ ಮಾಡಬೇಕು. ಮೀಸಲಾತಿ ಬಂದರೆ ಸಾಕಷ್ಟು ಲಾಭ ಇದೆ. ಸರ್ಕಾರ ಸಹ ಸಣ್ಣ ಸಮುದಾಯದತ್ತ ಹೆಚ್ಚು ಗಮನ ನೀಡಬೇಕು. ಅದಕ್ಕಾಗಿ ಮಡಿವಾಳ ಸಮುದಾಯವು ಹೆಚ್ಚು ಹೆಚ್ಚು ಸಂಘಟಿತರಾಗುವ ಮೂಲಕ ಸರ್ಕಾರಗಳಿಗೆ, ರಾಜಕೀಯ ಪಕ್ಷಗಳಿಗೆ ನಮ್ಮ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಅನೇಕ ದಾರ್ಶನಿಕರು ತಮ್ಮನ್ನು ತಾವು ಸುಟ್ಟುಕೊಂಡು ಜಗತ್ತಿಗೆ ಬೆಳಕು ನೀಡಿದವರು. ಮಡಿವಾಳ ಮಾಚಿದೇವರು ನಮ್ಮ ಕುಲದ ತಿಲಕರು. ಅವರಿಂದ ಸಮಾಜಕ್ಕೆ ಹೆಸರು ಬಂದಿದೆ. ಹಣ ಗಳಿಸುವ ಜೊತೆಗೆ ಜ್ಞಾನದ ಶಕ್ತಿ ನೀಡಿರುವ ಕಾರಣಕ್ಕೆ ಅವರು ಸದಾ ಪ್ರಾತಃ ಸ್ಮರಣೀಯರು ಎಂದು ಬಣ್ಣಿಸಿದರು.
ಶ್ರೀ ಮಡಿವಾಳ ಮಾಚಿದೇವರು ನಮ್ಮ ಕುಲದ ಉದ್ಧಾರಕ. ಹೀಗಾಗಿ ಪೂಜಿಸಬೇಕು. ಅವರು ಸಮಾಜಕ್ಕೆ ನೀಡಿರುವ ಪ್ರತಿಯೊಂದು ವಚನದಲ್ಲಿ ಜೀವನದ ಅನುಭವ ಮತ್ತು ಮಾರ್ಗದರ್ಶನ ಇದೆ. ಹಾಗಾಗಿಯೇ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಾತ್ರವಲ್ಲ ಸಾಗಬೇಕು ಎಂದು ತಿಳಿಸಿದರು.
ಸಮಾಜದ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ಮಡಿವಾಳ ಸಮಾಜದ ಮಕ್ಕಳು ಯಾರೂ ಕೂಡಾ ಉನ್ನತ ಶಿಕ್ಷಣ ಪಡೆಯಲು ಆಗಿಲ್ಲ. ಬಹಳಷ್ಟು ಜನರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಉನ್ನತ ಶಿಕ್ಷಣ, ಹುದ್ದೆಗೇರಲು ಅನುಕೂಲ ಆಗುವಂತೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಮಾಜದ ಮಕ್ಕಳು ಓದಿನ ಕಡೆಗೆ ಹೆಚ್ಚು ಗಮನ ನೀಡಬೇಕು. ಉತ್ತಮ ಶಿಕ್ಷಣ ಪಡೆದಲ್ಲಿ ಎಲ್ಲೆಡೆ ಉತ್ತಮ ಸ್ಥಾನಮಾನ ದೊರೆಯುತ್ತದೆ. ವಿಶೇಷವಾಗಿ ಮಕ್ಕಳು ಮೊಬೈಲ್ ದಾಸ್ಯದಿಂದ ಹೊರ ಬರಬೇಕು. ಮನೆಯಿಂದ ಶಾಲೆ, ಕಾಲೇಜು ಹೋಗುವವ ರೆಗೂ ಮೊಬೈಲ್ ನಲ್ಲೇ ಮುಳುಗಿ ಹೋಗುವುದು ಕಂಡು ಬರುತ್ತದೆ. ಗೆಳೆಯರ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು. ತಂದೆ ತಾಯಂದಿರು ಸಹ ಮಕ್ಕಳ ಅಭ್ಯಾಸದ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಮೂಡ ಬಿದಿರೆಯ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯ, ಜಿಲ್ಲಾ ಶ್ರಿ ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನ ಕುಮಾರ್, ಆರ್.ಎನ್. ಧನಂಜಯ, ಸುರೇಶ್ ಕೋಗುಂಡೆ, ಅಂಜಿನಪ್ಪ ಪೂಜಾರ್, ಎಂ.ಎನ್. ಬಸವರಾಜಪ್ಪ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್. ಮಹಂತೇಶ್ ಇತರರು ಇದ್ದರು.