ಆರೋಗ್ಯ ಸುಧಾರಣೆಯಲ್ಲಿ ಆಯುಷ್ ಪದ್ದತಿ ಅಳವಡಿಕೆಗೆ ಜಾಗೃತಿ
ದಾವಣಗೆರೆ, ಆ. 25 – ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಜಿಲ್ಲಾ ಆಯುಷ್ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ಹಳೆ ಕಡ್ಲೇಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಆಯುರ್ವಿದ್ಯಾ ಶಾಲಾ ಮಕ್ಕಳಿಗೆ ಆಯುಷ್ ಪದ್ಧತಿಗಳ ಮೂಲಕ ಆರೋಗ್ಯ ಜೀವನ ಶೈಲಿಯ ಶಿಕ್ಷಣ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಯೋಗೇಂದ್ರಕುಮಾರ್. ಬಿ.ಯು. ಅವರು ಆಯುರ್ವಿದ್ಯಾಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ 5 ಜಿಲ್ಲೆಗಳಿಗೆ ಈ ಕಾರ್ಯಕ್ರಮ ನಿಗದಿಪಡಿಸಿದ್ದು, ಜಿಲ್ಲೆಯ ಆಯ್ದ 60 ಶಾಲೆಗಳಲ್ಲಿ ಆಯುರ್ವಿಧ್ಯೇಯ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಆಯೋಜಿಸಲಾಗುವುದು. ಮತ್ತು ಆಯುಷ್ ವೈದ್ಯರು ಮತ್ತು ಆಯುರ್ವಿದ್ಯಾ ಕಾರ್ಯಕ್ರಮದ ವೈದ್ಯರನ್ನೊಳಗೊಂಡ ತಂಡವು ಶಾಲೆಗಳಿಗೆ ಭೇಟಿ ನೀಡಿ ಆಯುಷ್ ವೈದ್ಯೆ ಪದ್ದತಿಗಳ ಬಗ್ಗೆ ಜಾಗೃತಿ ಮೂಡಿಸಿ, ನಂತರ ಕರ ಪತ್ರ ವಿತರಣೆ ಹಾಗೂ ಔಷಧಿ ಸಸ್ಯಗಳ ವಿತರಣೆಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಕಿಶೋರಿ ಕೆ.ಎಸ್. ರವರು ಔಷಧಿ ಸಸ್ಯಗಳ ಮಾಹಿತಿ ನೀಡಿದರು. ಆಯುರ್ವಿದ್ಯಾ ವೈದ್ಯ ಡಾ. ಸಿ.ಕೆ. ವಿನುತಾ ರವರು ವಿದ್ಯಾರ್ಥಿಗಳ ದಿನಚರಿ, ಆಹಾರ ಮತ್ತು ಆರೋಗ್ಯದ ವಿಷಯ ಕುರಿತು ಉಪನ್ಯಾಸ ನೀಡಿದರು. ನಂತರ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿತರಿಸಿ ಮಕ್ಕಳಲ್ಲಿ ಆಯುಷ್ ವೈದ್ಯ ಪದ್ದತಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಲಾಯಿತು.
ಶಾಲೆಯ ಶಿಕ್ಷಕ ಜೆ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ದೇಶ್ ಈ. ಬಿಸನಳ್ಳಿ ರವರು ಆಯುಷ್ ಪರಿಚಯ ಕುರಿತು ತಿಳಿಸಿದರು.