ಹರಿಹರದ ಕಾರ್ಯಕ್ರಮದಲ್ಲಿ ಯೋಧ ಪ್ರಕಾಶ್ ಟಿ. ಲಮಾಣಿ ಸಲಹೆ
ಹರಿಹರ, ಆ.25- ಮಕ್ಕಳಿಗೆ ಬಾಲ್ಯದಲ್ಲಿಯೇ ದೇಶಾಭಿಮಾನ ಮೂಡಿಸುವ ಕಾರ್ಯವು ಶಿಕ್ಷಕರು ಮತ್ತು ಪಾಲಕರಿಂದ ಆಗಬೇಕಿದೆ ಎಂದು ನಿವೃತ್ತ ಯೋಧ ಕ್ಯಾಪ್ಟನ್ ಪ್ರಕಾಶ್ ಟಿ. ಲಮಾಣಿ ಸಲಹೆ ನೀಡಿದರು.
ನಗರದ ಗಾಂಧಿ ಮೈದಾನ ಕ್ರೀಡಾ ಇಲಾಖೆಯ ಸಂಕೀರ್ಣದ ಮುಂಭಾಗದ ಗ್ರಾಮ ದೇವತೆ ಎಗ್ ಫ್ರೈಡ್ ರೈಸ್ ಮತ್ತು ಚಿಕನ್ ಪಕೋಡ ವ್ಯಾಪಾರಸ್ಥರ ಸಂಘದಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
17 ವರ್ಷಗಳ ಕಾಲ ಮಿಲಿಟರಿಯಲ್ಲಿ ಕೆಲಸ ಮಾಡಿದ ಆತ್ಮ ತೃಪ್ತಿ ನನಗಿದೆ. 2020ರಲ್ಲಿ ಲಡಾಖ್‌ನ ಗಡಿಯಲ್ಲಿ ಚೀನಾ ಮತ್ತು ಭಾರತೀಯ ಪಡೆಗಳು ಮುಖಾಮುಖಿ ಮತ್ತು ಚಕಮಕಿ ತೊಡಗಿದ ಸಂದರ್ಭದಲ್ಲಿ ಯೋಧರು ಹೋರಾಟ ಮಾಡಿದ ಕ್ಷಣ ನೆನಪಿಸಿಕೊಂಡ ಅವರು, ಬಲಿಷ್ಠ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ಯುವಕರು ಯೋಧನಂತೆ ಕೆಲಸ ಮಾಡಬೇಕು ಎಂದರು.
ಮಹಿಳೆಯರು ದೇಶ ಸೇವೆಯಲ್ಲಿ ತೊಡಗುವ ಮೂಲಕ ಭಾರತಾಂಬೆಯ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಮನೆಯಲ್ಲಿರುವ ಮಹಿಳೆಯರು ತಮ್ಮ ಮಕ್ಕಳಿಗೆ ದೇಶಾಭಿಮಾನ ಬೆಳೆಸುವ ಮೂಲಕ ದೇಶ ಸೇವೆ ಮಾಡಬೇಕಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಶೇಖರಗೌಡ ಪಾಟೀಲ್ ಮಾತನಾಡಿ, ಅನೇಕರ ಬಲಿದಾನ ಮತ್ತು ಹೋರಾಟದ ಮೂಲಕ ಪಡೆದ ಸ್ವಾತಂತ್ರ್ಯವನ್ನು ಇಂದು ಸಂತೋಷದಿಂದ ಆಚರಿಸುತ್ತಿದ್ದೇವೆ.
ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದವರನ್ನು ಸ್ಮರಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಈ ಮೂಲಕ ಇಂದಿನ ಯುವ ಪೀಳಿಗೆಗೆ ದೇಶಾಭಿಮಾನ ಮೂಡಿಸಬೇಕಿದೆ ಎಂದರು.
ಪತ್ರಕರ್ತ ಜಿ.ಕೆ ಪಂಚಾಕ್ಷರಿ ಮಾತನಾಡಿ, ಫುಟ್ಪಾತ್ ವ್ಯಾಪಾರಿಗಳು ತಾವು ತಯಾರಿಸುವ ಆಹಾರದಲ್ಲಿ ಯಾವುದೇ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಟೆಸ್ಟಿಂಗ್ ಪೌಡರ್ ಬಳಸಬಾರದು.
ಈಗಾಗಲೇ ಸರ್ಕಾರವು ಕಲರ್ ಮೇಸ್ಟ್ರಿಟ್ಟ ಟೆಸ್ಟಿಂಗ್ ಪೌಡರ್ ಬಳಸಿದಂತೆ ಆದೇಶ ಮಾಡಿದ್ದು, ಸರ್ಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಇದೇ ವೇಳೆ ನಿವೃತ್ತ ಯೋಧ ಪ್ರಕಾಶ್ ಟಿ. ಲಮಾಣಿ ಹಾಗೂ ಅಗ್ನಿಶಾಮಕ ದಳದ ಪ್ರಭಾರಿ ಪಿಎಸ್‌ಐ ಸಂಜೀವಪ್ಪ ಅವರನ್ನು ಸಂಘದ ಸದಸ್ಯರಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಕಾರ್ ಆರ್ಟ್ಸ್ ಅಧ್ಯಕ್ಷ ರಾಮು, ಪುಟ್ಪಾತ್ ವ್ಯಾಪಾರಿಗಳಾದ ಕೆ. ರಘು, ರಾಘವೇಂದ್ರ ಐರಣಿ, ಹನುಮಂತಪ್ಪ ಕೆಂಚಗುಂಡಿ, ಅಲ್ತಾಫ್, ಈಶ್ವರ್, ರಮೇಶ್ ಭಂಡಾರಿ, ಕೃಷ್ಣಪ್ಪ ಐರಣಿ, ವಿಕ್ಕಿ, ಗುಡ್ಯಪ್ಪ, ಶ್ರೀನಿವಾಸ್ ಚಾಕ್ನಿ, ಅಕ್ಕಮ್ಮ, ರಮೇಶ್ ಹಿಂಡಿ ಇತರರಿದ್ದರು.