ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ

ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ

ಹರಪನಹಳ್ಳಿ, ಆ.22- ಧಾರವಾಡ ಉಚ್ಚ ನ್ಯಾಯಾಲಯ ಪೀಠದಿಂದ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದ್ದರಿಂದ ಇಲ್ಲಿಯ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಮುಂದೂಡಿಕೆಯಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮತ್ತು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನದ ವಿಚಾರವಾಗಿ ಪುರಸಭೆಯ ಸದಸ್ಯ ಟಿ. ವೆಂಕಟೇಶ ನ್ಯಾಯಾಲಯದ ಮೊರೆ ಹೋಗಿದ್ದರಿಂದ ನ್ಯಾಯಾಲಯವು ಈ ಚುನಾವಣೆಗೆ ತಡೆಯಾಜ್ಞೆ ನೀಡಿ. ವಿಚಾರಣೆಯನ್ನು ಆ.29ಕ್ಕೆ ಮುಂದೂಡಿದೆ.

ತಡೆಯಾಜ್ಞೆ ಆದೇಶ ಪ್ರತಿ ಸಿಗದಿದ್ದರಿಂದ ತಹಶೀಲ್ದಾರ್‌ ಬಿ.ವಿ. ಗಿರೀಶ್‌ ಬಾಬು ಆ.21ರ ಬೆಳಗ್ಗೆ 10.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. 

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಿಂದ 20ನೇ ವಾರ್ಡಿನ ಫಾತೀಮಾಬೀ ಹಾಗೂ ಬಿಜೆಪಿಯಿಂದ ಕೌಟಿ  ಸುಮಾ ಮತ್ತು  ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಎಚ್.ಕೊಟ್ರೇಶ್‌ ನಾಮಪತ್ರ ಸಲ್ಲಿಸಿದ್ದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಹಾಗೂ ಪುರಸಭೆ ಸದಸ್ಯರು ಪುರಸಭಾ ಸಭಾಂಗಣಕ್ಕೆ ಆಗಮಿಸಿದ ನಂತರ ಕಿರಣ್ ಶ್ಯಾನಭಾಗ್, ಹರಾಳ್ ಅಶೋಕ, ಎಂ.ಕೆ. ಜಾವೀದ್, ಡಿ. ರೊಕ್ಕಪ್ಪ ಹಾಗೂ ಕೌಟಿ ಸುಮಾ ಉಚ್ಚ ನ್ಯಾಯಾಲಯ ನೀಡಿದ ತಡೆಯಾಜ್ಞೆ ಆದೇಶ ಪ್ರತಿಯನ್ನು ಚುನಾವಣಾಧಿ ಕಾರಿ ತಹಶೀಲ್ದಾರ್‌ ಬಿ.ವಿ. ಗಿರೀಶ್‌ ಬಾಬು ಅವರಿಗೆ ಸಲ್ಲಿಸಿದ್ದರಿಂದ ಚುನಾವಣೆ ಪ್ರಕ್ರಿಯೆ ಮುಂದೂಡಿದರು.

ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತವಿದ್ದರೂ ಪುರಸಭೆ ಆಡಳಿತದ ಗದ್ದುಗೆ ಏರಲು ವಿಫಲವಾಯಿತು. ನ್ಯಾಯಾಲಯ ನೀಡುವ ತೀರ್ಮಾನದ ಮೇಲೆ ಯಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ ಎಂದು ತಿಳಿಯಲಿದೆ.

error: Content is protected !!