ಹರಿಹರ, ಅ,22- ನಗರದ ರಾಘವೇಂದ್ರ ಸ್ವಾಮಿ ಮಠದ ಹಿಂಬದಿಯ ತುಂಗಭದ್ರಾ ನದಿ ತಟದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತುಂಗಾರತಿ ಸ್ಥಳದಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ ವಿವಿಧ ಬಗೆಯ ಸಸಿಗಳನ್ನು ಬೆಳೆಸುವ ಕಾರ್ಯ ಪಂಚಮಸಾಲಿ ಗುರು ಪೀಠಾಧ್ಯಕ್ಷ ರಾದ ಶ್ರೀ ವಚನಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಭರದಿಂದ ನಡೆದಿದೆ.
ಕಾಶಿ ಕ್ಷೇತ್ರದಲ್ಲಿ ನಡೆಯುವ ತುಂಗಾರತಿ ಮಾದರಿಯಂತೆ ಹರಿಹರ ನಗರದ ತುಂ ಗಭದ್ರಾ ನದಿಯ ದಂಡೆಯ ಮೇಲೆ ತುಂಗಾ ರತಿ ಮಾಡುವ ಕಲ್ಪನೆ ಇಟ್ಕೊಂಡು ಶ್ರೀಗಳು ಈಗಾಗಲೇ ತುಂಗಭದ್ರಾ ನದಿಯ ದಡದ ಲ್ಲಿರುವ ಸ್ಥಳದಲ್ಲಿ ಸುಮಾರು10 ಕೋಟಿ ರೂ. ವೆಚ್ಚದಲ್ಲಿ ಬಹಳಷ್ಟು ಕಾಮಗಾರಿ ಮಾಡಿ ಒಂದು ಹಂತಕ್ಕೆ ತಂದಿದ್ದಾರೆ.
ಈ ಸ್ಥಳದಲ್ಲಿ ರಾಘವೇಂದ್ರ ಸ್ವಾಮಿಗಳ ಮಠದ ಹಿಂಬದಿಯಿಂದ ಹಿಡಿದು ನದಿ ನೀರು ಹರಿಯುವ ಸ್ಥಳದವರೆಗೂ ಕಲ್ಲು ಬಂಡೆಗಳನ್ನು ಒಡೆದು ಆ ಸ್ಥಳದಲ್ಲಿ ಬಿಳಿ ಗ್ರಾನೈಟ್ ಕಲ್ಲುಗಳನ್ನು ಹಾಕಿಸಿದ್ದಾರೆ. ಬಿಳಿ ಗ್ರಾನೈಟ್ ಮೇಲೆ ಎಂಟು ಬೃಹತ್ ಕರಿ ಕಲ್ಲಿನಿಂದ ಶಿಲಾ ಮಂಟಪ ನಿರ್ಮಾಣ ಮಾಡಲಾಗಿದೆ. ಹನ್ನೆರಡು ಅಡಿ ಎತ್ತರದ ಶಿವನ ಪ್ರತಿಮೆ ಸ್ಥಾಪಿಸಲಾಗಿದೆ.
ತುಂಗಾರತಿ ಸ್ಥಳದಲ್ಲಿ ಈಗಾಗಲೇ ಶೇ. 70 ರಷ್ಟು ಕಾಮಗಾರಿ ಆಗಿದೆ. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಬಸವೇಶ್ವರರು, ಅಕ್ಕಮಹಾದೇವಿ, ಅಲ್ಲಮಪ್ರಭು, ಪತಂಜಲಿ, ಧನ್ವಂತರಿ ಮೂರ್ತಿಗಳನ್ನು ಅಮೃತ ಶಿಲೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ.
ಜೊತೆಗೆ ಈ ಸ್ಥಳದಲ್ಲಿ ದೇವಸ್ಥಾನ ಇದ್ದರೇ ಭಯ-ಭಕ್ತಿ ಬರುತ್ತದೆ. ಆ ದೃಷ್ಟಿಯಿಂದ ಪ್ರವಾಸಿಗರಿಗೆ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ತುಂಗಭದ್ರೇಶ್ವರ ದೇವಸ್ಥಾನ ನಿರ್ಮಾಣ. ಮಹಿಳೆಯರಿಗೆ ಬಟ್ಟೆಗಳನ್ನು ಬದಲಿಸುವುದಕ್ಕೆ ಸುಸಜ್ಜಿತ ಕೊಠಡಿ ಮತ್ತು ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ.
– ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ, ಪಂಚಮಸಾಲಿ ಗುರುಪೀಠಾಧ್ಯಕ್ಷರು
ಸೇತುವೆ ಪಕ್ಕದಲ್ಲಿರುವ ಗೋಡೆ ಸಾಕಷ್ಟು ಶಿಥಿಲವಾಗಿತ್ತು. ಮಳೆ ಬಂದಾಗ ಕುಸಿಯುವ ಹಂತದಲ್ಲಿತ್ತು. ಅದನ್ನು ಕಾಂಕ್ರೀಟ್ ಹಾಕಿ ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ಮೈದುಂಬಿ ಹರಿಯುತ್ತಿರುವ ತುಂಗಭದ್ರೆ ನೋಡಿ ಕಣ್ತುಂಬಿಕೊಳ್ಳಲು ಬಂದ ಸಹಸ್ರಾರು ಪ್ರವಾಸಿಗರು ತುಂಗಾರತಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ವೀಕ್ಷಿ ಸುವುದರ ಜೊತೆಗೆ ನಿರ್ಮಾಣವಾಗಿರುವ ಮಂಟಪದ ಬಳಿ ಫೋಟೋ ತೆಗೆಸಿಕೊಂಡು ಸಂತಸಪಡುವ ದೃಶ್ಯ ಕಂಡು ಬಂತು.
ಮುಂಬರುವ ದಿನಗಳಲ್ಲಿ ಇದೊಂದು ಐತಿಹಾಸಿಕ ಸ್ಥಳವಾಗಿ ಮಾರ್ಪಾಡಾಗಲಿದೆ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗು ತ್ತಿದೆ. ಪ್ರವಾಸಿಗರು ಬಂದು ಹೋಗುವುದನ್ನು ಗಮನಿಸಿದ ವಚನಾನಂದ ಶ್ರೀ ಮತ್ತಷ್ಟು ಅಭಿವೃದ್ಧಿ ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಮೂಲಕ, ಈ ಸ್ಥಳದಲ್ಲಿ ಅಡಿಕೆ, ತೆಂಗು, ಮಾವು, ಸೇರಿದಂತೆ ಹತ್ತಕ್ಕೂ ಹೆಚ್ಚು ಬಗೆಯ ತಳಿಗಳ ನೂರಾರು ಗಿಡಗಳನ್ನು ಬೆಂಗಳೂರಿನಿಂದ ತರಿಸಿಕೊಂಡು ನೆಟ್ಟು ಆ ಸ್ಥಳವನ್ನು ಉದ್ಯಾನವನದ ಮಾದರಿ ಯಲ್ಲಿ ನಿರ್ಮಾಣ ಮಾಡುತ್ತಿರುವುದರಿಂದ, ಈ ಸ್ಥಳಕ್ಕೆ ಮತ್ತಷ್ಟು ಜೀವಕಳೆ ಬಂದಿದ್ದು, ಇದರಿಂದಾಗಿ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಕ್ಷೇತ್ರವಾಗಿ ಹೊರಹೊಮ್ಮಿದೆ.