ದಾವಣಗೆರೆ, ಆ.22- ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ನೀಡಿದ ರಾಷ್ಟ್ರ ವಿರೋಧಿ ಹಾಗೂ ಪ್ರಚೋದನಾತ್ಮಕ ಹೇಳಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಕಾನೂನು ಪ್ರಕೋಷ್ಠವು ಎಸ್ಪಿ ಉಮಾ ಪ್ರಶಾಂತ್ ಅವರಿಗೆ ದೂರು ಸಲ್ಲಿಸಿತು.
ಈ ವೇಳೆ ಮಾತನಾಡಿದ ಕಾನೂನು ಪ್ರಕೋಷ್ಠದ ಮುಖಂಡರು, ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದನ್ನು ಖಂಡಿಸಿ ಮಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಐವಾನ್ ಡಿಸೋಜಾ ಅವರು ರಾಜ್ಯಪಾಲರನ್ನು ಕುರಿತು `ಕೂಡಲೇ ಗವರ್ನರ್ ಹಿಂದಕ್ಕೆ ಹೋಗಬೇಕು. ಹೋಗದೇ ಇದ್ದರೆ, ಬಾಂಗ್ಲಾ ದೇಶದಲ್ಲಾದ ರೀತಿಯಲ್ಲಿ ಗವರ್ನರ್ ಕಚೇರಿಗೆ ಮಾಡಬೇಕಾಗುತ್ತದೆ ಎಂಬ ಹೇಳಿಕೆ ಖಂಡನೀಯ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಪಕ್ಷದ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡುವ ರೀತಿಯಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ ರಾಜ್ಯಪಾಲರನ್ನು ಅವಮಾನಿಸಿದ್ದಾರೆ ಎಂದು ದೂರಿದರು.
ಸಚಿವರಾದ ಕೃಷ್ಣ ಭೈರೇಗೌಡ ಹಾಗೂ ಜಮೀರ್ ಅಹಮದ್ ರಾಜ್ಯಪಾಲರನ್ನು ನಿಂದಿಸುವ ಮೂಲಕ ಸಂವಿಧಾನಕ್ಕೆ ಅವಮಾನಿಸಿದ್ದಾರೆ. ಆದ್ದರಿಂದ ಈ ಮೂವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗುವಂತೆ ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಹೆಚ್. ದಿವಾಕರ್, ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ, ಯು.ಜಿ. ಪಾಟೀಲ್, ಅಜಯ್ ಇದ್ದರು.