ದಾವಣಗೆರೆ, ಆ. 22 – ಲಿಂ. ಶರಣ ವಿ. ಸಿದ್ದರಾಮಣ್ಣನವರು ಬದುಕಿನ ಅಂತಿಮ ದಿನಗಳವರೆಗೂ ಅಪ್ಪಟ ಬಸವ ತತ್ವವನ್ನು ಹೊಂದಿದ್ದರು ಎಂದು ರೇಖಾ ಮಹಾರುದ್ರಪ್ಪ ಹೇಳಿದರು.
ನಗರದ ಆಶಾಕಿರಣ ವಿಶೇಷ ಮಕ್ಕಳ ಶಾಲಾ ಆವರಣದ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ಶತಾಯುಷಿ ಲಿಂ. ವಿ. ಸಿದ್ದರಾಮಣ್ಣ ಶರಣರಿಗೆ ನುಡಿನಮನ ಮತ್ತು ವಿಶೇಷ ಮಕ್ಕಳ ಮನೋವಿಕಾಸಕ್ಕಾಗಿ ಅನುಭಾವಿಗಳಿಂದ ಜ್ಞಾನ ದಾಸೋಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾರುದ್ರಪ್ಪ ಹಾಗೂ ಅವರ ಪತ್ನಿ ರೇಖಾ ಮಹಾರುದ್ರಪ್ಪ ಸಿದ್ದರಾಮಣ್ಣನವರ ಸೇವೆಯನ್ನು ದಶಕಗಳ ಕಾಲ ಮಾಡುತ್ತಾ ಬಂದಿದ್ದು, ಬಾಲ್ಯ ಜೀವನದಿಂದ ಅವರ ಬದುಕಿನ ಅಂತಿಮ ದಿನಗಳ ವರೆಗೆ ಅವರಲ್ಲಿದ್ದ ಬಸವ ನಿಷ್ಠೆಯನ್ನು ಕುರಿತು ಹೇಳಿದರು. ಶರಣರು ಸ್ವತಃ ವಚನಗಳನ್ನು ರಚಿಸುತ್ತಿದ್ದರು. ನಾಟಕ, ರೂಪಕಗಳನ್ನು ಹಾಗೂ ವಚನಗಳಿಗೆ ರಾಗ ಸಂಯೋಜನೆಯನ್ನು ಮಾಡುತ್ತಿದ್ದರು. ಅಪ್ಪಟ ಬಸವ ತತ್ವವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು ಎಂದರು.
ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಮಾತನಾಡಿ, ಸಿದ್ದರಾಮಣ್ಣ ಅವರು ಅಂಧ, ಅನಾಥ, ವಿಶೇಷ ಮಕ್ಕಳಲ್ಲಿ ದೇವರನ್ನು ಕಾಣುತ್ತಿದ್ದರು. ಮಕ್ಕಳಲ್ಲಿ ಮಕ್ಕಳಾಗಿ ಬೆರೆತು, ಶರಣ ತತ್ವದ ಚಿಂತನೆಗಳನ್ನು ಮಕ್ಕಳಲ್ಲಿ ತುಂಬುತ್ತಿದ್ದರು. ಈ ಮೂಲಕ ಮಕ್ಕಳ ಮನೋವಿಕಾಸಗೊಳಿಸಿ ಜ್ಞಾನ ಉಣಬಡಿಸುತ್ತಿದ್ದರು ಎಂದು ತಿಳಿಸಿದರು.
ಆವರಗೆರೆ ರುದ್ರಮುನಿ, ಎಂ.ಎಸ್. ಮಂಜುನಾಥ್, ದೇವಿಗೆರೆ ಗಿರೀಶಣ್ಣ, ಸಂಗಪ್ಪ ತೋಟದ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.