ಕಠಿಣ ಪರಿಶ್ರಮದಿಂದ ಶ್ರೇಯಸ್ಸು ಹೆಚ್ಚುತ್ತದೆ

ಕಠಿಣ ಪರಿಶ್ರಮದಿಂದ ಶ್ರೇಯಸ್ಸು ಹೆಚ್ಚುತ್ತದೆ

ಭದ್ರಾ ಕಾಲೇಜಿನ ಕಾರ್ಯಕ್ರಮದಲ್ಲಿ  ವಿಶ್ರಾಂತ ಡೀನ್ ಡಾ. ಎಲ್. ಮಂಜುನಾಥ್

ದಾವಣಗೆರೆ, ಆ. 22- ಶಿಕ್ಷಣವು ಜೀವನದ ಸಿದ್ಧತೆ. ಕಠಿಣ ಪರಿಶ್ರಮದಿಂದ ಶ್ರೇಯಸ್ಸು ಹೆಚ್ಚಾಗುತ್ತದೆ ಎಂದು ವಿಶ್ರಾಂತ ಡೀನ್ ಡಾ. ಎಲ್. ಮಂಜುನಾಥ್ ತಿಳಿಸಿದರು.

ನಗರದ ರೋಟರಿ ಕ್ಲಬ್ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಭದ್ರಾ ಸ್ನಾತಕೋತ್ತರ ಕೇಂದ್ರದ 2023-24 ನೇ ಸಾಲಿನ ಎಂ.ಕಾಂ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ 2022-23 ನೇ ಸಾಲಿನ  ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

ಬಡ ಕುಟುಂಬದಿಂದ ಸಾಧಕರು ಹೊರ ಹೊಮ್ಮುತ್ತಾರೆ  ಎಂಬುದಕ್ಕೆ  ರವಿ ಡಿ. ಚೆನ್ನಣ್ಣರಂತಹ ಹಲವರ ಉದಾಹರಣೆಗಳನ್ನು ನೀಡುತ್ತಾ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹಾಗೂ ವೃತ್ತಿ ಗೌರವ ಕುರಿತು ತಿಳಿಸಿದರು ಹಾಗೂ  ಭದ್ರಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವವರು ಜೀವನದಲ್ಲಿ ಭದ್ರತೆ ಕಂಡುಕೊಂಡು, ನಿಯತ್ತಿನ ಬದುಕು ಪಡೆಯಲಿ ಎಂದು ಹಾರೈಸಿದರು.

ಸೆನೆಟ್ ಹಾಗೂ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲ ಮನೋಭಾವ ಅತ್ಯವಶ್ಯಕವೆಂದು ಹೇಳುವುದರ ಮೂಲಕ ಯುವ ಮಕ್ಕಳಲ್ಲಿ ಕೀಳರಿಮೆಯ ಮನೋಭಾವನೆ ಇರಬಾರದೆಂದು ತಿಳಿಸಿದರು. ಇಂದಿನ ತಾಂತ್ರಿಕ ಯುಗದಲ್ಲಿ ಅನೇಕ ತಂತ್ರಜ್ಞಾನ ಹಾಗೂ ಆವಿಷ್ಕಾರಗಳಿಂದ ಆಧುನಿಕ ಯುಗದ ನಿರ್ಮಾಣವಾಗಿದೆ. ಹಾಗಾಗಿ ಯುವ ಜನಾಂಗ ಅತ್ಯಂತ ಪ್ರಜ್ಞಾಪೂರ್ವಕವಾಗಿ ಜೀವನ ರೂಪಿಸಿಕೊಳ್ಳ ಬೇಕಾಗಿದೆ ಎಂದರು.

ಭದ್ರಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಮುರುಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ ಮಾಡಿದಂತೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ. ಡಿ. ಚಂದ್ರಪ್ಪ, ಎಂ. ಸಂಕೇತ್ ಉಪಸ್ಥಿತರಿದ್ದರು. ಕು. ವನಿತಾ, ಸಾಧನಾ ಸ್ವಾಗತಿಸಿದರು. ವನಿತಾ, ಭಾವನಾ ತೇಲ್ಕರ್ ವಂದಿಸಿದರು.

error: Content is protected !!