ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚರ್ಚಾಸ್ಪರ್ಧೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ
ದಾವಣಗೆರೆ, ಆ. 21- ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಾಮಾನ್ಯ ಜ್ಞಾನ ಮತ್ತು ಪ್ರಾಪಂಚಿಕ ತಿಳುವಳಿಕೆಯನ್ನು ಹೆಚ್ಚು ಮಾಡಿಕೊಳ್ಳಬಹುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಶಾಲಾ ಶಿಕ್ಷಣ ಇಲಾಖೆ, ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಹೈಸ್ಕೂಲ್ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಹಕಾರ ವಿಷಯ ಕುರಿತು ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಬಂಧ ಹಾಗೂ ಚರ್ಚಾಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ಸಹಕಾರ ಕ್ಷೇತ್ರ ಪ್ರಪಂಚದಾದ್ಯಂತ ಬೆಳೆದಿದೆ. ಭಾರತದಲ್ಲಿ ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಭವಿಷ್ಯದಲ್ಲಿ ಸರ್ಕಾರಿ ನೌಕರಿ ಸಿಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಪೂರ್ಣ ಜ್ಞಾನ ಹೊಂದಿ ಸಮಾನ ಮನಸ್ಕರು ಸೇರಿಕೊಂಡು ಹಳ್ಳಿ, ಹಳ್ಳಿಗಳಲ್ಲೂ ಸಹಕಾರ ಸಂಘಗಳು, ಸ್ತ್ರೀ ಶಕ್ತಿ ಸಂಘಗಳನ್ನು ಆರಂಭಿಸಿದರೆ ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆರ್.ಜಿ.ಶ್ರೀನಿವಾಸ ಮೂರ್ತಿ ಮಾತನಾಡಿ, ಚಿಕ್ಕಂದಿನಿಂದಲೇ ಸಹಕಾರಿ ಕ್ಷೇತ್ರದ ಬಗ್ಗೆ ತಿಳುವಳಿಕೆ ಪಡೆಯುವುದು ಅಗತ್ಯವಾಗಿದೆ. ಸಹಕಾರ ಎನ್ನುವುದು ಕಣ್ಣಿಗೆ ಕಾಣುವುದಿಲ್ಲ. ಆದರೂ ಅದನ್ನು ಬೆಳೆಸಿಕೊಂಡು ಹೋಗಬಹುದು. ಸಹಕಾರ ಇಲ್ಲದೇ ಯಾವುದೇ ವಸ್ತುಗಳು ಉತ್ಪಾದನೆಯಾಗುವುದಿಲ್ಲ. ಈ ರೀತಿಯಲ್ಲಿ ಸಹಕಾರಿ ಕ್ಷೇತ್ರ ನಡೆದುಕೊಂಡು ಬರುತ್ತಿದೆ. ಹಾಲು, ರಸಗೊಬ್ಬರ ಮೊದಲಾದ ವಸ್ತುಗಳು ಸಹಕಾರಿ ಕ್ಷೇತ್ರದ ಮೂಲಕ ಉತ್ಪಾದನೆಯಾದವುಗಳಾಗಿವೆ ಎಂದರು.
ಸಹಕಾರಿ ಕ್ಷೇತ್ರ ಬದ್ಧತೆಯಿಂದ ನಡೆದುಕೊಂಡು ಹೋಗುತ್ತಿದೆ. ವಿದ್ಯಾರ್ಥಿಗಳು ಈ ಕ್ಷೇತ್ರದ ಕುರಿತು ಹೆಚ್ಚು ತಿಳಿದುಕೊಳ್ಳಬೇಕಿದೆ. ಈ ಬಗ್ಗೆ ಜಿಲ್ಲಾ ಸಹಕಾರ ಯೂನಿಯನ್ ಮತ್ತು ಜಿಲ್ಲಾ ಸಹಕಾರ ಇಲಾಖೆಗಳ ಉಪನಿಬಂಧಕರ ಕಚೇರಿಗಳಿಗೆ ಹೋಗಿ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ತೀರ್ಪುಗಾರರಾಗಿ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ, ಡಾ.ಬಸವರಾಜ್ ಬಣಕಾರ್, ಎಸ್‌ಬಿಸಿ ಕಾಲೇಜು ಪ್ರಾಂಶುಪಾಲ ಡಾ ಕೆ ಷಣ್ಮುಖಪ್ಪ, ಮೌಲ್ಯಮಾಪಕರಾಗಿ ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎನ್.ಜಿ. ರುದ್ರಪ್ಪ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಎನ್. ಶಿವಪ್ಪ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್.ಸಂತೋಷ್ ಕುಮಾರ್ ನಿರೂಪಿಸಿದರು. ಯೂನಿಯನ್ ವ್ಯವಸ್ಥಾಪಕ ಕೆ.ಎಂ.ಜಗದೀಶ್ ವಂದಿಸಿದರು. ಸಿಇಒ ಹಾಲಪ್ಪ ಕೋಡಿಹಳ್ಳಿ ಸ್ವಾಗತಿಸಿದರು. ವಿ.ರಂಗನಾಥ್ ಮತ್ತು ಸ್ವಾಮಿ ಆರ್ ಉಪಸ್ಥಿತರಿದ್ದರು.