ಪೋಷಕಾಂಶಯುಕ್ತ ತರಕಾರಿಗಳಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ

ಪೋಷಕಾಂಶಯುಕ್ತ ತರಕಾರಿಗಳಿಂದ ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿ

ಜಗಳೂರು ತಾಲ್ಲೂಕಿನ `ಪೌಷ್ಟಿಕ ಕೈತೋಟ ತರಬೇತಿ’ ಕಾರ್ಯಕ್ರಮದಲ್ಲಿ ದಾವಣಗೆರೆ  ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ

ಜಗಳೂರು, ಆ.20- ಮನುಷ್ಯ ಪೋಷಕಾಂಶ  ಹೊಂದಿದ ತರಕಾರಿಗಳನ್ನು ಸೇವಿಸಿದಾಗ ಮಾತ್ರ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿದರು.

ತಾಲ್ಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ `ಪೌಷ್ಟಿಕ ಕೈತೋಟ ತರಬೇತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಹು ವಾರ್ಷಿಕ ತರಕಾರಿಗಳಾದ ನುಗ್ಗೆ ಮತ್ತು ಹಲವು ಬಗೆಯ ತರಕಾರಿಗಳನ್ನು ಮನೆಯ ಕೈ ತೋಟದಲ್ಲಿ ಬೆಳೆಸಿ, ಅವುಗಳನ್ನು ಆಹಾರ ಕ್ರಮದಲ್ಲಿ ಬಳಸಿಕೊಂಡಾಗ ದೇಹಕ್ಕೆ ಉತ್ತಮ ಪೋಷಕಾಂಶ ವನ್ನು ಪಡೆಯಬಹುದು ಎಂದು ತಿಳಿಸಿದರು.

ನುಗ್ಗೆ ಬೆಳೆಯುವುದರಿಂದ ವರ್ಷ ಪೂರ್ತಿ ಸೊಪ್ಪು ಸಿಗಲಿದ್ದು, ಇದರ ಸೇವನೆಯಿಂದ ದೇಹದಲ್ಲಿ ಕಬ್ಬಿನಾಂಶ ಹಾಗೂ ಹಿಮೋಗ್ಲೋಬಿನ್‌ ಪ್ರಮಾಣ ದ್ವಿಗುಣಗೊಂಡು ರೋಗ ನಿರೋಧಕ ಶಕ್ತಿ ಹೆಚ್ಚಲಿದೆ ಮತ್ತು ಮಾನಸಿಕ ಸದೃಢತೆಗೆ ಇದು ಅನುಕೂಲಕರ ಎಂದು  ಹೇಳಿದರು.

ಕೇಂದ್ರದ ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಿ. ಪಾಟೀಲ್ ಮಾತನಾಡಿ, ಆರೋಗ್ಯವೇ ಆದಾಯ ಎಂಬುದನ್ನು ಎಲ್ಲರೂ ತಿಳಿಯಬೇಕಿದೆ. ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿದ್ದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದ ಅವರು, ನುಗ್ಗೆ ಸೊಪ್ಪಿನ ಮೌಲ್ಯವರ್ಧನೆ ಹಾಗೂ ಅದರ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭ ತಿಳಿಸಿದರು.

ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಅವಿನಾಶ್ ಮಾತನಾಡಿ, ಮನೆಯ ಸದಸ್ಯರ ಸ್ವಾಸ್ಥ್ಯ ಕಾಪಾಡಲು ಆಹಾರ ಪದ್ಧತಿ ಎಷ್ಟು ಮುಖ್ಯವೋ, ಅದೇ ರೀತಿ ನಮ್ಮ ಸುತ್ತ ಮುತ್ತಲಿನ ವಾತಾವರಣದ ಸ್ವಚ್ಛತೆ ಕಾಪಾಡುವುದು ಅಷ್ಟೇ ಮುಖ್ಯ ಎಂದು ತಿಳಿಸಿದರು.

ಪರಿಸರ ಸ್ವಚ್ಛತೆಗಾಗಿ ಎಲ್ಲರೂ ಕೈ ಜೋಡಿಸಿದರೆ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ `ಪೌಷ್ಠಿಕ ಕೈ ತೋಟ ಯೋಜನೆ’ಯಡಿ 30 ರೈತ ಮಹಿಳೆಯರಿಗೆ ನುಗ್ಗೆ ಸಸಿಯನ್ನು ವಿತರಿಸಿದರು. ಬಸಪ್ಪನಹಟ್ಟಿ ಗ್ರಾಮದ ಪ್ರಗತಿಪರ ರೈತರಾದ ಕೃಷ್ಣಮೂರ್ತಿ, ಶಶಿಕುಮಾರ ಹಾಗೂ ಮಹಿಳಾ ರೈತರು ಉಪಸ್ಥಿತರಿದ್ದರು.

error: Content is protected !!