ದೇವರಾಜ ಅರಸು 109ನೇ ಜಯಂತಿ ಕಾರ್ಯಕ್ರಮದಲ್ಲಿ ಬಿ.ಬಿ. ರೇವಣನಾಯ್ಕ್ ಉಪನ್ಯಾಸ
ಹರಿಹರ, ಆ.20- ಸಮಾಜದ ಎಲ್ಲಾ ವರ್ಗದ ಜನರ ಧ್ವನಿಯಾಗಿ ಸೇವೆ ಸಲ್ಲಿಸಿದ ಡಿ. ದೇವರಾಜ್ ಅರಸ್ ಅವರು ಜನರ ಮನಸ್ಸಲ್ಲಿ ಅಜರಾಮರ ಆಗಿದ್ದಾರೆ ಎಂದು ಎಸ್‌ಜಿಟಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಿ.ಬಿ. ರೇವಣನಾಯ್ಕ್ ಹೇಳಿದರು.
ತಾಲ್ಲೂಕು ಆಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆಯಿಂದ ನಗರದ ಗಿರಿಯಮ್ಮ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಡಿ. ದೇವರಾಜ ಅರಸು ಅವರ 109ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ದೇವರಾಜ್ ಅರಸ್ ಅವರು ಸಮಾಜವಾದ ಮತ್ತು ಸಮಾನತಾವಾದದ ಚಿಂತನೆ ಹೊಂದಿದ್ದರು. ಇವರು ತಮ್ಮ ಆಡಳಿತಾವಧಿಯಲ್ಲಿ ಸಮಾಜದಲ್ಲಿನ ಅಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆ ಮಾಡುವ ಮೂಲಕ ಧ್ವನಿಯಿಲ್ಲದವರಿಗೆ ಧ್ವನಿಯಾಗಿದ್ದರು ಎಂದು ಹೇಳಿದರು.
1952ರಲ್ಲಿ ರಾಜಕೀಯ ಪ್ರವೇಶಿಸಿದ ಅರಸ್ ಶ್ರೇಷ್ಠ ಚಿಂತಕರ ಸಾಲಿಗೆ ಸೇರಿದ್ದಾರೆ. ಮೊದಲು ಶಾಸಕರಾಗಿದ್ದಾಗ ಎಸ್. ನಿಜಲಿಂಗಪ್ಪ ಅವರ ಆಡಳಿತದಲ್ಲಿ ಸಾರಿಗೆ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ತದನಂತರ 1972ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಬಡವರಿಗೆ ಹೆಚ್ಚಿನ ಅನುಕೂಲ ಮಾಡಿದರು ಎಂದು ತಿಳಿಸಿದರು.
ಜೀತ ಪದ್ಧತಿ ಹಾಗೂ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಮತ್ತು ಊಳುವವನೇ ಭೂಮಿಯ ಒಡೆಯ ಯೋಜನೆ ಸೇರಿದಂತೆ ಅನೇಕ ಕಾರ್ಯಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಸಮಿತಿಯ ಗೌರವ ಅಧ್ಯಕ್ಷ ಹೆಚ್.ಕೆ. ಕೊಟ್ರಪ್ಪ ಮಾತನಾಡಿ, ಅರಸು ಅವರು ಬಡವರ ಪಾಲಿನ ಕಾಮಧೇನು ಆಗಿದ್ದರು. ಇಂತಹ ವಿಶೇಷ ವ್ಯಕ್ತಿಯ ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಗುರು ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ತಾ.ಪಂ ಇಓ ಸುಮಲತಾ ಎಸ್.ಪಿ. ಚಂದ್ರಶೇಖರ್, ಸಿಪಿಐ ಎಸ್. ದೇವಾನಂದ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಎಇಇ ಆಸ್ಮಾಬಾನು, ಕೃಷಿ ಇಲಾಖೆಯ ಎಇಇ ನಾರನಗೌಡ, ಲೋಕೋಪಯೋಗಿ ಇಲಾಖೆಯ ಎಇಇ ಸುಂದರೇಶ್, ಕಾಡಾ ಇಲಾಖೆಯ ಎಇಇ ಕವನ, ಹಿಂದುಳಿದ ವರ್ಗಗಳ ಇಲಾಖೆಯ ಪಟೇಲ್, ಹಿಂದುಳಿದ ವರ್ಗಗಳ ಸಮಿತಿಯ ಮುಖಂಡರಾದ ವೈ. ಕೃಷ್ಣಮೂರ್ತಿ, ಕೆ.ಬಿ. ರಾಜಶೇಖರ್, ಚಂದ್ರಪ್ಪ, ಬಸಪ್ಪ, ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್, ಎಂ. ಉಮ್ಮಣ್ಣ, ವಿ.ಎ. ಸಮೀರ್, ಸಂತೋಷ್ ಇತರರಿದ್ದರು.
ಭೂಮಿಕಾ ಪ್ರಾರ್ಥಿಸಿದರು. ಆಸ್ಮಾಬಾನು ಸ್ವಾಗತಿಸಿದರು. ಮಂಜುನಾಥ್ ವಂದಿಸಿದರು. ಯಶೋಧ ಮತ್ತು ತಂಡ ನಾಡಗೀತೆ ಗಾಯನ ಮಾಡಿದರು.