ಹೊನ್ನಾಳಿ, ಆ. 20 – ನಿನ್ನೆ ಸುರಿದ ಸುಂಟರಗಾಳಿ ಸಮೇತ ಭಾರೀ ಮಳೆಗೆ ಹೊನ್ನಾಳಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬೆಳೆ ಹಾನಿಯುಂಟಾಗಿದೆ ಎಂದು ತಹಶೀಲ್ದಾರ್ ಪಟ್ಟರಾಜೇಗೌಡ ತಿಳಿಸಿದರು.
ಬೆಳೆ ಹಾನಿಯುಂಟಾದ ಪ್ರದೇಶಗಳಿಗೆ ಅಧಿಕಾರಿಗಳ ಜಂಟಿ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಕೃಷಿ ಮತ್ತು ತೋಟಗಾರಿಕೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳಿಗೆ ಬೆಳೆ ಹಾನಿಯ ಬಗ್ಗೆ ವರದಿ ನೀಡಲು ಸೂಚಿಸಲಾಗಿದ್ದು, ವರದಿ ಕೈ ಸೇರಿದ ತಕ್ಷಣವೇ ಹಾನಿಯುಂಟಾದ ರೈತರಿಗೆ ಬೆಳೆ ಪರಿಹಾರ ನೀಡಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಉಜ್ಜಿನಪುರ ಗ್ರಾಮದ ಲಕ್ಷ್ಮಿಬಾಯಿ ಅವರ ಮನೆ ಸಂಪೂರ್ಣ ಹಾಳಾಗಿದ್ದು, ಹಿರೇಗೋಣಿಗೆರೆ ಗ್ರಾಮದ ರಘು ಅವರ ಮನೆಯು ಭಾಗಶಃ ಹಾನಿಯಾಗಿದ್ದು, ಯಾವುದೇ ಜೀವ ಹಾನಿ ಸಂಭವಿಸಿರುವುದಿಲ್ಲ ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕರಾದ ಪ್ರತಿಮಾ ಮಾಸಡಿ ಗ್ರಾಮದಲ್ಲಿ 30 ಹೆಕ್ಟೇರ್, ಹಿರೇಬಾಸೂರು ಗ್ರಾಮದಲ್ಲಿ 2 ಹೆಕ್ಟೇರ್, ಹಿರೇಗೋಣಿಗೆರೆ ಗ್ರಾಮದಲ್ಲಿ 5 ಹೆಕ್ಟೇರ್ ಮೆಕ್ಕೆಜೋಳದ ಬೆಳೆಯು ಹಾಳಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ರೇಖಾ ಮಳೆಯ ಜೊತೆಗೆ ಭೀಕರ ಸುಂಟರಗಾಳಿ ಬೀಸಿದ್ದರಿಂದ ಮಾಸಡಿ ಗ್ರಾಮದಲ್ಲಿ 6 ಹೆಕ್ಟೇರ್ ಅಡಿಕೆ, 1 ಎಕರೆ ತೆಂಗಿನ ಬೆಳೆ ಹಾಳಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಅತೀಕ್ ಉಲ್ಲಾ, ರಾಜಸ್ವ ನಿರೀಕ್ಷಕರಾದ ದಿನೇಶ್ ಬಾಬು, ಕೆ.ಎಸ್. ಸುಧೀರ್, ರಮೇಶ್, ಗ್ರಾಮ ಆಡಳಿತಾಧಿಕಾರಿ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.