ಹಸಿ ಅಡಿಕೆ ಮಾರುಕಟ್ಟೆ ಆರಂಭಕ್ಕೆ ಚಿಂತನೆ

ಹಸಿ ಅಡಿಕೆ ಮಾರುಕಟ್ಟೆ ಆರಂಭಕ್ಕೆ ಚಿಂತನೆ

ಮಲೇಬೆನ್ನೂರಿನ ಶಿವ ಸಹಕಾರ ಸಂಘದಲ್ಲಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್

ಮಲೇಬೆನ್ನೂರು, ಆ.20- ಹರಿಹರ ಬೈಪಾಸ್ ಅಥವಾ ಮಲೇಬೆನ್ನೂರಿನಲ್ಲಿ ರೈತರ  ಸಹಕಾರ ಸಂಘದ ಮೂಲಕ ಹಸಿ ಅಡಿಕೆ ಮಾರುಕಟ್ಟೆ ಆರಂಭಿಸುವ ಉದ್ದೇಶ ಇದೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್ ಹೇಳಿದರು.

ಇಲ್ಲಿನ ಶಿವ ವಿವಿದೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಚನ್ನಗಿರಿ, ಹೊನ್ನಾಳಿ ನಂತರ ಹರಿಹರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಗಾರರಿದ್ದು, ಅಡಿಕೆ ಬೆಳೆಗಾ ರರಿಗೆ ಸೂಕ್ತ ಮಾರುಕಟ್ಟೆಯನ್ನು ಹರಿಹರ ತಾಲ್ಲೂಕಿನಲ್ಲಿಯೇ ಕಲ್ಪಿಸುವ ಉದ್ದೇಶವಿದೆ.

ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಅಡಿಕೆ ಬೆಳೆಗಾರರ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ ಹನಗವಾಡಿ ಕುಮಾರ್ ಅವರು, ಹೊಳೆಸಿರಿಗೆರೆಯಲ್ಲಿ ನಿರ್ಮಿಸುತ್ತಿರುವ ಶಿವ ವಿವಿಧೋದ್ದೇಶ ಸಹಕಾರ ಸಂಘದ ಶಾಖಾ ಕಟ್ಟಡಕ್ಕೆ ಅಗತ್ಯ ಸೌಲಭ್ಯವನ್ನು ಅಪೆಕ್ಸ್ ಬ್ಯಾಂಕಿನ ಅನುದಾನದಲ್ಲಿ ಕಲ್ಪಿಸುವುದಾಗಿ ಭರವಸೆ ನೀಡಿ, ಸಂಘದ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ನಿರ್ದೇಶಕ ಹೆಚ್.ಜಿ.ಚಂದ್ರಶೇಖರ್, ನಿಟ್ಟೂರಿನ ಬಿ.ಜಿ.ಧನಂಜಯ್ ಮಾತನಾಡಿ, ಅವಕಾಶ ಇದ್ದರೆ ನಮ್ಮ ಶಿವ ಸಹಕಾರ ಸಂಘದಿಂದಲೇ ಹಸಿ ಅಡಿಕೆ ಮಾರುಕಟ್ಟೆ ಮಾಡಲು ಸಹಕಾರ ನೀಡಿ ಎಂದು ಹನಗವಾಡಿ ಕುಮಾರ್ ಅವರಿಗೆ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಡಾ. ಬಿ.ಚಂದ್ರಶೇಖರ್ ಮಾತನಾಡಿ, ಹನಗವಾಡಿ ಕುಮಾರ್ ಅವರು, ಹರಿಹರ ತಾಲ್ಲೂಕಿನಲ್ಲಿ ಎಲ್ಲಾ ಸಹಕಾರ ಸಂಘಗಳ ಏಳಿಗೆಗೆ ಶ್ರಮಿಸಲಿ ಮತ್ತು ರೈತರಿಗೆ ಹೆಚ್ಚುವರಿ ಸಾಲ ಸೌಲಭ್ಯ ಕಲ್ಪಿಸಲಿ ಎಂದರು.

ಸಂಘದ ಉಪಾಧ್ಯಕ್ಷ ಯಲವಟ್ಟಿ ಆಂಜನೇಯ, ನಿರ್ದೇಶಕರಾದ ಕರೇಗೌಡ್ರ ರಂಗನಾಥ್, ಕುಂಬಳೂರಿನ ಹೆಚ್.ಬಿ.ಶಿವಕುಮಾರ್, ಹುಲ್ಲುಮನಿ ಷಣ್ಮುಖಪ್ಪ, ಬೆಳ್ಳೂಡಿಯ ಗೌಡ್ರ ರವಿಶಂಕರ್, ಎ.ಕೆ.ದೇವೇಂದ್ರಪ್ಪ, ಜಿಗಳಿ ಪ್ರಕಾಶ್, ಕೊಕ್ಕನೂರಿನ ಜಿ.ಡಿ.ರಮೇಶ್, ಸಿರಿಗೆರೆಯ ಬಿ.ಶೇಖರಪ್ಪ, ಪಾನಿಪೂರಿ ಸಿದ್ದೇಶ್, ಶ್ರೀಮತಿ ನಾಗರತ್ನ ಧನಂಜಯ, ಕಾರ್ಯದರ್ಶಿ ಜಿ.ಎಂ.ನಳಿನಾ ಮತ್ತು ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಕಾರರು ಈ ವೇಳೆ ಹಾಜರಿದ್ದರು.

error: Content is protected !!