ದಾವಣಗೆರೆ, ಆ. 19 – ವಚನ, ಕಾಯಕ ನಿಷ್ಠೆಯ ಮೂಲಕ ಸಮಾಜ ಸುಧಾರಣೆಗೆ ನುಲಿಯ ಚಂದ್ರಯ್ಯ ಅತ್ಯುನ್ನತ ಕೊಡುಗೆ ನೀಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕೊರಚ, ಕೊರಮ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ನುಲಿಯ ಚಂದ್ರಯ್ಯ ಜಯಂತಿಯಲ್ಲಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಮೂಲಕ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಬಸವಣ್ಣನ ಕಾರ್ಯಕ್ಷೇತ್ರ ಕಲ್ಯಾಣಕ್ಕೆ ಬಂದು ಕಲ್ಯಾಣದ ಕೆರೆಗಳಲ್ಲಿ ಸಿಗುವ ಹೊಡಕೆ, ಚೇಣಿ ಮುಂತಾದ ನಾರುಗ ಳಿಂದ ಹಗ್ಗ ಹೊಸೆದು ಮಾರಾಟ ಮಾಡಿ ಬಂದ ಹಣದಿಂದ ಜಂಗಮ ದಾಸೋಹ ನಡೆಸುತ್ತಿದ್ದರು ಎಂದು ತಿಳಿಸಿದರು.
ನುಲಿಯ ಕಾಯಕ ದಿಂದಾಗಿ ಮುಂದೆ ನುಲಿಯ ಚಂದ್ರಯ್ಯ ನೆಂದು ಹೆಸರಾದವರು ಹಗ್ಗ ಮಾರುವ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾ ಬಸವಣ್ಣನವರಿಗೆ ಪ್ರಿಯರಾದರು ಎಂದು ತಿಳಿಸಿದರು.
ಮಲೇಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕೆ.ಜಿ. ಮಂಜುನಾಥ್ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನುಲಿಯ ಚಂದ್ರಯ್ಯ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ, ಜನ ಕ್ರಾಂತಿ ಸಂಪಾದಕ ಕೆ.ಆರ್. ಗಂಗರಾಜು, ಆನಂದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವೀಂದ್ರ ಹಾಗೂ ಇತರರು ಉಪಸ್ಥಿತರಿದ್ದರು.