ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು
ದಾವಣಗೆರೆ, ಆ. 19- ಆಧುನಿಕತೆಯ ನಾಗಾಲೋಟದಲ್ಲಿ ಛಾಯಾಗ್ರಹಣ ಕ್ಷೇತ್ರವೂ ಸಹ ಬದಲಾಗುತ್ತಿದ್ದು, ಅದಕ್ಕನುಗುಣವಾಗಿ ಛಾಯಾಗ್ರಾಹಕರು, ವಿಡಿಯೋಗ್ರಾಫರ್‌ಗಳು ಆಧುನಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ಹಿರೇಮಠದ ಸಭಾಂಗಣದಲ್ಲಿ ದಾವಣಗೆರೆ ತಾಲ್ಲೂಕು ಫೋಟೋ ಮತ್ತು ವಿಡಿಯೋ ಗ್ರಾಫರ್ಸ್ ಸಂಘದ 12 ನೇ ವಾರ್ಷಿಕೋತ್ಸವ ಹಾಗೂ 184 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಛಾಯಾಗ್ರಾಹಕರಿಗೆ ಹಾಗೂ ವೃತ್ತಿ ಬಾಂಧವರಿಗೆ , ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
25 ವರ್ಷಗಳ ಹಿಂದೆ ಇದ್ದಂತಹ ಛಾಯಾಗ್ರಹಣ ಕ್ಷೇತ್ರದ ಕಾಲವೇ ಬೇರೆ. ಈಗಿನ ಪರಿಸ್ಥಿತಿಯೇ ಬೇರೆಯಾಗಿದೆ. ಹಿಂದೆ ದವಸ-ಧಾನ್ಯಗಳ, ವಿದ್ಯೆ, ಸಂಪರ್ಕ, ಹಣದ ಕೊರತೆ ಇದ್ದರೂ ಶಾಂತಿ, ನೆಮ್ಮದಿ, ವಿಶ್ವಾಸ ಇತ್ತು. ಆದರೆ ಬದಲಾದ ಕಾಲದಲ್ಲಿ ದುಡಿಮೆ, ಹಣ, ವಿದ್ಯೆ, ಸಂಪರ್ಕ ಎಲ್ಲವೂ ಇದ್ದರೂ ವಿಶ್ವಾಸ, ಶಾಂತಿ, ನೆಮ್ಮದಿ, ಸಂಸ್ಕಾರ, ಮೌಲ್ಯಗಳ ಕೊರತೆ ಕಂಡು ಬರುತ್ತಿದೆ ಎಂದರು.
ದೇವರು ಮನಸ್ಸು ಮಾಡಿದರೆ ಯಾರೂ ನಿರೀಕ್ಷೆ ಮಾಡದಷ್ಟು ಒಳ್ಳೆಯದನ್ನು ಕೊಡುತ್ತಾನೆ. ಅದೇ ದೇವರು ಕ್ರೋಧಿತನಾದರೆ ಕೊಟ್ಟಿದ್ದನ್ನಷ್ಟೇ ಅಲ್ಲದೇ ಚರ್ಮವನ್ನು ಬಿಡದಂತೆ ಕಸಿಯುತ್ತಾನೆ. ಹಾಗಾಗಿ ಕ್ಷಣಿಕ ಸುಖಕ್ಕಾಗಿ ದುಶ್ಚಟಗಳಿಗೆ ಬಲಿಯಾಗದೇ, ಆಸೆ, ಆಮಿಷ, ಸ್ವಾರ್ಥಕ್ಕೆ ಒಳಗಾಗದೇ ಆದರ್ಶಮಯ, ಮೌಲ್ಯಯುತ, ಪರೋಪಕಾರಿ ಜೀವನ ನಮ್ಮದಾಗಿಸಿಕೊಳ್ಳೋಣ ಎಂದು ಹಿತ ನುಡಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಛಾಯಾಗ್ರಾಹಕರ ಅಕಾಡೆಮಿ ಮಾಡುವ ಬೇಡಿಕೆ ಸೇರಿದಂತೆ ನ್ಯಾಯಸಮ್ಮತ ಬೇಡಿಕೆಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹಾಗೂ ಕಾರ್ಮಿಕ ಇಲಾಖೆ ಸವಲತ್ತುಗಳನ್ನು ಕೊಡಿಸುವ ಬಗ್ಗೆ ಕಾರ್ಮಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ, ಸಾಧ್ಯವಾದರೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲು ನಾನು ಬದ್ದನಿದ್ದೇನೆ ಎಂದು ಹೇಳಿದರು.
ಬೆಂಗಳೂರಿನ ಅನುಷ್ಠಾನ ಫೌಂಡೇಶನ್ ಮುಖ್ಯಸ್ಥರಾದ ಎಸ್.ಟಿ. ಸುಷ್ಮಾ ಮಾತನಾಡಿ, ಎಲ್ಲಾ ನೋವುಗಳನ್ನು ನುಂಗಿಕೊಂಡು `ಸ್ಮೈಲ್ ಪ್ಲೀಸ್’ ಎನ್ನುತ್ತಾ ಎಲ್ಲರನ್ನು ನಗಿಸಿ, ಛಾಯಾಚಿತ್ರ ತೆಗೆದುಕೊಡುವ ಛಾಯಾಗ್ರಾಹಕರ ವೃತ್ತಿ ವಿಶೇಷವಾದುದು. ಪ್ರತಿಯೊಬ್ಬರ ಬಾಳಿನ ನೆನಪಿನ ಬುತ್ತಿಯನ್ನು ಕಟ್ಟಿಕೊಡುವ ಛಾಯಾಗ್ರಾಹಕರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ನೀಡಲು ಮುಂದೆಬರಬೇಕಾಗಿದೆ. ಆಶ್ರಯ ಕಲ್ಪಿಸುವ ಜೊತೆ ವೃತ್ತಿಗೆ ಪೂರಕವಾದ ಪರಿಕರಗಳನ್ನು ಖರೀದಿಸಲು ಸಹಾಯ ಹಸ್ತ ಚಾಚಬೇಕಾಗಿದೆ ಎಂದು ಹೇಳಿದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್ ಮಾತನಾಡಿ, ಛಾಯಾಗ್ರಾಹಕರು, ವಿಡಿಯೋಗ್ರಾಫರ್ ಹಾಗೂ ಮಾಧ್ಯಮ ಕ್ಷೇತ್ರ ಒಂದಕ್ಕೊಂದು ಪೂರಕವಾದವುಗಳು. ಯಾವುದೇ ಸಭೆ, ಸಮಾರಂಭ ಸೇರಿದಂತೆ ಇತರೆ ಎಲ್ಲಾ ಕಾರ್ಯಗಳಲ್ಲೂ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಪಾತ್ರ ಮಹತ್ವವಾದುದು ಎಂದರು.
ಸಂಘದ ಅಧ್ಯಕ್ಷ ದೇವನಗರಿ ಎಂ. ಮನು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಮರ ಸೇನೆ ರಾಜ್ಯಾಧ್ಯಕ್ಷ ಎಂ.ಎಸ್. ಸಿದ್ದೇಶ್ ಕೋಟ್ಯಾಳ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುಮ್ಮನೂರು ಶ್ರೀನಿವಾಸ್ ಮಾತನಾಡಿದರು.
ಸಂಘದ ಪದಾಧಿಕಾರಿಗಳಾದ ಎನ್. ಶ್ರವಣಕುಮಾರ್, ಮುದ್ದಳ್ಳಿ ಅರುಣ್, ಬಿ. ಮಂಜುನಾಥ್, ಎಸ್. ರಾಜಶೇಖರ ಕೊಂಡಜ್ಜಿ, ಬೆಂಗಳೂರಿನ ಪ್ರಶಾಂತ್, ಹೊಸಪೇಟೆ ಖಾಜಾಪೀರ್, ಡಿ. ರಮೇಶ, ಸಂತೋಷ್ ದೊಡ್ಮನಿ, ಹೆಚ್.ಎಸ್. ಸಂಜಯ್, ಕೆ. ದೇವೇಂದ್ರಪ್ಪ, ಕೆ.ಎಂ. ವೆಂಕಟೇಶ್, ವಿಜಯಕುಮಾರ್ ಮುಧೋಳ್, ಡಿ. ರಂಗನಾಥ್, ಎನ್.ಕೆ. ಕೊಟ್ರೇಶ್ ಸೇರಿದಂತೆ ಅನೇಕರಿದ್ದರು.