ದಾವಣಗೆರೆ, ಆ. 18- ಇಲ್ಲಿಗೆ ಸಮೀಪದ ಕಕ್ಕರಗೊಳ್ಳ ಗ್ರಾಮದ ಪಟೇಲ್ ವೀರಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ ಸಹಯೋಗದೊಂದಿಗೆ ಫಾರ್ಮಿಂಗ್ ಬ್ಯಾಡ್ಜ್ ಚಟುವಟಿಕೆಯ ಕೃಷಿ ನಡೆಗೆಯತ್ತ ಅಂಗವಾಗಿ ಕಬ್ಸ್ ಅಂಡ್ ಬುಲ್ ಬುಲ್ಸ್ ಮತ್ತು ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳು ಕಕ್ಕರಗೊಳ್ಳದ ಭತ್ತದ ಗದ್ದೆಗೆ ಭೇಟಿ ನೀಡಿ ರೈತರ ಜೊತೆ ಸೇರಿ ಭತ್ತದ ನಾಟಿ ಮಾಡಿದರು.
ಭತ್ತದ ಪೈರಿನ ಬೆಳವಣಿಗೆಯ ಅವಧಿ, ಫಸಲಿನ ಇಳುವರಿ, ಬಳಸುವ ರಸಗೊಬ್ಬ ಮತ್ತು ಕೀಟನಾಶಕಗಳ ಬಗ್ಗೆ ರೈತರಿಂದ ಮಾಹಿತಿ ಪಡೆದ ಮಕ್ಕಳು, ಶಾಲೆಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಪಡೆದ ಜ್ಞಾನದಿಂದ ರೈತರು ಬಳಸುವ ರಸಗೊಬ್ಬರ ಮತ್ತು ಕೀಟ ನಾಶಕಗಳಿಗೆ ಪರ್ಯಾಯವಾಗಿ ಸಾವಯವ ಗೊಬ್ಬರ ಮತ್ತು ಜೀವಾಮೃತ ಬಳಸಲು ರೈತ ರಿಗೆ ಮನವಿ ಮಾಡಿ ಜವಾಬ್ದಾರಿ ಮೆರೆದರು.
ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕರಾದ ಶ್ರೀಮತಿ ಪ್ರಣೀತ ಗಿರಿರಾಜ್, ಸಂಯೋಜಕ ಸೋಮ ಶೇಖರಪ್ಪ ಹಾಗೂ ಕಲಿವೀರಪ್ಪ, ಸ್ಕೌಟ್ಸ್ ಮಾಸ್ಟರ್ ಸೋಮ್ಲಾನಾಯ್ಕ್, ಗೈಡ್ಸ್ ಕ್ಯಾಪ್ಟನ್ ಭಾವನ ಕೆ. ಉಪಸ್ಥಿತರಿದ್ದರು.