ಚನ್ನಗಿರಿ ತಾಲ್ಲೂಕಿನ ಕಾರ್ಯಕ್ರಮದಲ್ಲಿ ದಾವಣಗೆರೆಯ ಕೆವಿಕೆ ಕೃಷಿ ವಿಜ್ಞಾನಿ ಮಲ್ಲಿಕಾರ್ಜುನ
ಚನ್ನಗಿರಿ, ಆ. 18 – ಕೃಷಿಯಲ್ಲಿ ಡ್ರೋನ್ ಬಳಸಿ ಬೆಳೆಗಳಿಗೆ ನೀರು ಸಿಂಪಡಿಸಿದರೆ ಸಮಯ ಮತ್ತು ನೀರಿನ ಉಳಿತಾಯ ಮಾಡಬಹುದುದಾಗಿದೆ ಎಂದು ಕೃಷಿ ವಿಜ್ಞಾನಿ ಮಲ್ಲಿಕಾರ್ಜುನ ರೈತರಿಗೆ ತಿಳಿಸಿದರು.
ತಾಲ್ಲೂಕಿನ ಶಿವ ಕುಳೇನೂರಿನಲ್ಲಿ ದಾವಣಗೆರೆಯ ಐ.ಸಿ.ಎ.ಆರ್. ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ರೈತ ಸಂಪರ್ಕ ಕೇಂದ್ರ, ಸಂತೆಬೆನ್ನೂರು ಮತ್ತು ಕೃಷಿ ಇಲಾಖೆ, ಚನ್ನಗಿರಿ ಇವರ ಸಹಯೋಗದಲ್ಲಿ ಮೊನ್ನೆ ಹಮ್ಮಿಕೊಳ್ಳಲಾಗಿದ್ದ ಕೃಷಿ ಡ್ರೋನ್ ಮೂಲಕ ಸೋಯಾ, ಅವರೆ ಬೆಳೆಗೆ ಸಿಂಪಡಣೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವಿದಳ ಧಾನ್ಯಗಳ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕ ಇಳುವರಿ ಕೊಡುವ ತಳಿಗಳ ಪರಿಚಯದ ಜೊತೆಗೆ ಆಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಿದರೆ, ಅನುಕೂಲವಾಗುತ್ತದೆ. ಕೃಷಿಯಲ್ಲಿ ಡ್ರೋನ್ ಬಳಸಿ ಸಿಂಪಡಣೆ ಮಾಡುವುದರಿಂದ ನಿಖರತೆ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಮಾತ ನಾಡಿ, ಕೃಷಿಯಲ್ಲಿ ನವೀನ ತಾಂತ್ರಿಕತೆಯನ್ನು ಅಳವಡಿಸಿಕೊಂಡರೆ ಬೆಳೆಗಳ ಇಳುವರಿಯನ್ನು ಹೆಚ್ಚಿಸಬಹುದು. ಕೃಷಿ ಡ್ರೋನ್ ಬಳಸಿ ಸುಮಾರು 21 ಎಕರೆಯಷ್ಟು ಸಿಂಪಡನೆ ಮಾಡುವ ಗುರಿ ಹೊಂದಲಾಗಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಅರುಣ್ ಮಾತನಾಡಿ, ಕೃಷಿ ಇಲಾಖೆಯ ಸೌಲಭ್ಯಗಳನ್ನು ತಿಳಿಸಿ, ಮುಂದಿನ ದಿನಗಳಲ್ಲಿ ಕೂಲಿ ಆಳುಗಳ ಸಮಸ್ಯೆಗೆ ಡ್ರೋನ್ ಪರಿಹಾರವಾಗುತ್ತದೆ ಎಂದರು.
ಮಣ್ಣು ವಿಜ್ಞಾನಿ ಹೆಚ್.ಎಂ. ಸಣ್ಣಗೌಡರು, ಕೃಷಿ ಅಧಿಕಾರಿ ಮೆಹತಾಬ್ ಆಲಿ ಮತ್ತು ಇತ ರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.