ಕರವೇ ಸ್ವಾತಂತ್ಯೋತ್ಸವದಲ್ಲಿ ಹರಪನಹಳ್ಳಿ ತಾಲ್ಲೂಕು ಕಸಾಪ ಅಧ್ಯಕ್ಷ ಕೆ. ಉಚ್ಚೆಂಗಪ್ಪ
ಹರಪನಹಳ್ಳಿ. ಆ.18- ಸ್ವಾತಂತ್ರ್ಯ ದಿನ ಭಾರತದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನ. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ವಿಮೋಚನೆಯಾಗಲು ಲಕ್ಷಾಂತರ ಜನ ಪ್ರಾಣತೆತ್ತ ದಿನ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಎಲ್ಲಾ ವೀರರನ್ನು ನೆನಪು ಮಾಡಿ ನಮನ ಸಲ್ಲಿಸೋ ದಿನವೂ ಹೌದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎದುರುಗಡೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ 68ನೇ ಸ್ವಾತಂತ್ರ್ಯ ದಿನಚರಣೆಯಲ್ಲಿ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತ ಮಾತೆಯ ಮಕ್ಕಳಾದ ನಾವೆಲ್ಲ ಎಂದಿಗೂ ಪರಸ್ಪರರ ಧರ್ಮ, ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ನಮ್ಮ ರಾಷ್ಟ್ರವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಭಾರತದಲ್ಲಿ ಸಂಸ್ಕೃತಿ, ಭಾಷೆ ಹಾಗೂ ಧರ್ಮದಲ್ಲಿ ಸಾಕಷ್ಟು ವೈವಿಧ್ಯತೆ ಯನ್ನು ಕಾಣಬಹುದಾಗಿದೆ. ಆದರೂ ಕೂಡ ನಾವೆಲ್ಲ ಒಂದಾಗಿ ಏಕತೆಯಿಂದ ಭವ್ಯ ಭಾರತದಲ್ಲಿ ಬಾಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದರು.
ಪರಿವರ್ತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಅಧಿಕಾರ್ ಮಾತನಾಡಿ, ಭಾರತವು ಈಗಾಗಲೇ ಡಿಜಿಟಲ್ ಇಂಡಿಯಾದತ್ತ ಮುಖ ಮಾಡಿದೆ. ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ವೇಗದಲ್ಲಿ ಮುನ್ನುಗ್ಗುತ್ತಿದೆ. ಭಾರತದ ಯುಪಿಐ ವ್ಯವಸ್ಥೆಯು ವಿದೇಶಗಳ ಲ್ಲಿಯೂ ಮನೆ ಮಾತಾಗಿದೆ. ಸ್ವದೇಶಿ ನಿರ್ಮಿತ ವಸ್ತುಗಳಿಗೆ ವಿದೇಶಗಳಲ್ಲಿ ಮನ್ನಣೆ ದೊರಕು ತ್ತಿದೆ. ಇದೇ ರೀತಿ ಭಾರತವನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ಯುವ ಕಾರ್ಯ ನಮ್ಮಿಂದ ಆಗಬೇಕಿದೆ. ಭಾರತದ ಆರ್ಥಿಕತೆಯನ್ನು ಸದೃಢಗೊಳಿಸಲು ನಾವೆಲ್ಲರೂ ಕೊಡುಗೆ ನೀಡಬೇಕಿದೆ. ಶಿಕ್ಷಣ ಹಾಗೂ ಕೌಶಲ್ಯಗಳ ವಿಚಾರದಲ್ಲಿ ನಾವು ಇನ್ನಷ್ಟು ಸಾಧನೆಗಳನ್ನು ಮಾಡಬೇಕಿದೆ. ಅಸಮಾನತೆ, ಬಡತನ ಹಾಗೂ ಸಾಮಾಜಿಕ ಅನ್ಯಾಯಗಳಂತಹ ಪಿಡುಗುಗಳನ್ನು ದೂರ ಸರಿಸಿ, ನಾವು ಸಮೃದ್ಧ ಭಾರತವನ್ನು ಕಟ್ಟಬೇಕಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ್ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಎಂಬ ಪರಿಕಲ್ಪನೆ ಬಗ್ಗೆ ಸೂಕ್ಷ್ಮವಾಗಿ ನಾವೆಲ್ಲ ತಿಳಿದುಕೊಳ್ಳಬೇಕಿದೆ. – ತಮ್ಮ ಸ್ವಾತಂತ್ರ್ಯವನ್ನು ಇತರರ ಸ್ವಾತಂತ್ರ್ಯಕ್ಕೆ ಅಡ್ಡಿಯಾಗದಂತೆ, ಸಮಸ್ಯೆ ಆಗದಂತೆ ಬಳಸಿಕೊಳ್ಳಬೇಕು ಎಂಬುದನ್ನು ಯಾರು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಇಸ್ಮಾಯಿಲ್ ಎಲಿಗಾರ್ ಮಾತನಾಡಿದರು.
ಕರವೇ ಸಂಘಟನಾ ಕಾರ್ಯದರ್ಶಿ ಕೆ. ಕಲ್ಲಹಳ್ಳಿ ರುದ್ರಗೌಡ, ಪದಾಧಿಕಾರಿಗಳಾದ ಅಶೋಕ್ ಹಿಂದೂಸ್ತಾನಿ, ಕೆ. ವೆಂಕಟೇಶ್, ಶಿವಕುಮಾರ್ ಬಾಗಳಿ, ಇ.ಅಂಜಿನಪ್ಪ ಸಂಚಾಲಕರಾದ ನಂದೀಶ್, ಸುರೇಶ್ ಭಜರಂಗ ದಳ, ಚಿರಸ್ತಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಹನುಮಂತ, ಮಜ್ಜಿಗೆರೆ ಗ್ರಾಮ ಘಟಕದ ಅಧ್ಯಕ್ಷ ಹನುಮಂತ, ನೀಲಗುಂದ ಗ್ರಾಮ ಘಟಕದ ಅಧ್ಯಕ್ಷ ಅಶೋಕ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸ್ನೇಹಜೀವಿ, ತಲವಾಗಲು ದರ್ಶನ್, ಶಂಭುಲಿಂಗಯ್ಯ ಹಿರೇಮಠ, ಎ.ಎಸ್.ಐ. ನಿಂಗಪ್ಪ, ದಫೇದಾರ ರವಿ ಉಪಸ್ಥಿತರಿದ್ದರು.