ಹರಪನಹಳ್ಳಿ ತಾಲ್ಲೂಕು ಆಡಳಿತದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ, ಆ.16- ಬ್ರಿಟೀಷರ ಸಂಕೋಲೆಯಿಂದ ಬಿಡುಗಡೆಯಾಗಿ ಸ್ವಾತಂತ್ರ್ಯ ಪಡೆದುಕೊಳ್ಳಲು ಜೀವದಾನ ಮಾಡಿದ ಮಹನೀಯರಿಗೆ ಚಿರ ಋಣಿಯಾಗಿರಬೇಕು ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರಿಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ತಿಲಕ್, ಶಾಸ್ತ್ರೀಜಿ ಹೀಗೆ ಅನೇಕರು ಹೋರಾಟ ಮಾಡಿದರು. ತಮ್ಮ ಜೀವನವನ್ನು ದೇಶದ ಜನರ ಸಂತೋಷಕ್ಕಾಗಿ ಮೀಸಲಿಟ್ಟರು. ಹಾಗೆಯೇ ಇಂದು ನಮ್ಮ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಜ್ಞಾನವನ್ನು ಹೆಚ್ಚಿಸಿಕೊಂಡು, ಇಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕಿದೆ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಈ ಸ್ವಾತಂತ್ರ್ಯೋತ್ಸವ ಮಕ್ಕಳಿಗೆ, ಅಧಿಕಾರಿಗಳಿಗೆ ಸಿಮೀತವಾಗಬಾರದು ಸ್ವಾತಂತ್ರ್ಯ ಎಂಬ ಪರಿಕಲ್ಪನೆ ಬಗ್ಗೆ ಸೂಕ್ಷ್ಮವಾಗಿ ನಾವೆಲ್ಲ ತಿಳಿದುಕೊಳ್ಳಬೇಕಿದೆ ಎಂದರು
ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾದ ಸ್ವಾತಂತ್ರ್ಯ ನಮಗೆ ಲಭಿಸಿದೆ. ಕಳೆದ 78 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಭಾರತ ಜನಸಂಖ್ಯೆ ಜಾಸ್ತಿ ಇದ್ದರೂ ಕೂಡ, ಇತರೆ ದೇಶಗಳು ನಮ್ಮ ಮಾನವ ಸಂಪನ್ಮೂಲವನ್ನು ಬಳಿಸಿಕೊಳ್ಳುತ್ತಿವೆ. ಎಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಯಾವ ದೇಶದಲ್ಲಿ ಪ್ರಜೆಗಳಿಗೆ ಸ್ವಾತಂತ್ರ್ಯ ಇರುತ್ತದೋ, ಎಲ್ಲಿಯವರೆಗೆ ಪ್ರಜೆಗಳು ಸ್ವತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿರುತ್ತದೆ. ಅದಕ್ಕೆ ಕೊನೆ ಎಂಬುದು ಇಲ್ಲ. ಅದಕ್ಕೆ ಇಂದಿನ ಭಾರತವೇ ಸಾಕ್ಷಿ ಎಂದರು.
ಪುರಸಭೆ ಮುಖ್ಯಾಧಿಕಾರಿ ಯರಗುಡಿ ಶಿವಕುಮಾರ, ಪುರಸಭೆ ಸದಸ್ಯ ಡಿ. ಅಬ್ದುಲ್ ರಹಿಮಾನ್ ಸಾಬ್ ಮಾತನಾಡಿದರು.
ಯುವ ಕಾಂಗ್ರೇಸ್ ಅಧ್ಯಕ್ಷ ಮತ್ತೂರು ಬಸವರಾಜ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷಿ, ಅಂಜುಮನ್ ಮಾಜಿ ಅಧ್ಯಕ್ಷ ಸಿ. ಜಾವೀದ್, ತಹಶೀಲ್ದಾರ್ ಬಿ.ವಿ.ಗಿರೀಶಬಾಬು, ಕಾರ್ಯನಿರ್ವಾಹಣಾಧಿಕಾರಿ ವೈ.ಹೆಚ್. ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಯು. ಬಸವರಾಜಪ್ಪ, ಪುರಸಭೆ ಸದಸ್ಯರುಗಳಾದ ಲಾಟಿ ದಾದಾಪೀರ್, ಉದ್ದಾರ ಗಣೇಶ, ಜಾಕೀರ್ ಹುಸೇನ್ , ಮಂಜುನಾಥ ಇಜಂತಕರ್, ಭರತೇಶ, ಜಾವೀದ್, ಭೀಮವ್ವ ಸಣ್ಣಹಾಲಪ್ಪ, ಸಿ. ಹನುಮಕ್ಕ, ಮುಖಂಡರಾದ ಚಿಕ್ಕೇರಿ ಬಸಪ್ಪ, ಮೈದೂರು ರಾಮಣ್ಣ, ಹುಲಿಕಟ್ಟಿ ಚಂದ್ರಪ್ಪ, ಇಸ್ಮಾಯಿಲ್ ಎಲಿಗಾರ್, ಶಿಕ್ಷಣ ಇಲಾಖೆಯ ಗಿರಜ್ಜಿ ಮಂಜುನಾಥ ಉಪಸ್ಥಿತರಿದ್ದರು.